ಹರಪನಹಳ್ಳಿ: ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸಿಪಿಐ ಪಕ್ಷದ ಕಾರ್ಯಕರ್ತರು ಕೆರೆಗುಡಿಹಳ್ಳಿ ಗ್ರಾಮದಿಂದ ಚಿಕ್ಕಬ್ಬಳ್ಳಿ ಮೂಲಕ ಹೊಸಕೋಟೆ ಗ್ರಾಪಂ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ ಸಂತೋಷ್, ಆ. 6ರಿಂದ ದೇಶಾದ್ಯಂತ ಬದಲಾವಣೆ ಘೋಷಣೆ ಅಡಿಯಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡು ಶೋಷಣೆಯ ವಿರುದ್ಧ ಹೋರಾಟ ಮಾಡಲು ಕಮ್ಮನಿಸ್ಟ್ ಪಕ್ಷ ಸಿದ್ಧವಾಗಿದೆ. ಉದ್ಯೋಗ, ಕೃಷಿ ಸಮಸ್ಯೆಗಳು ನಿರಂತರ ಜಟಿಲಗೊಳ್ಳುತ್ತಿವೆ. ಶಿಕ್ಷಣ, ವಸತಿ, ಆರೋಗ್ಯ ಕುರಿತು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಹರಪನಹಳ್ಳಿ ಅತ್ಯಂತ ಬರ ಪೀಡಿತ ಪ್ರದೇಶವಾಗಿದ್ದು, ಧನಾತ್ಮಕ ಮಾಹಿತಿ ಪಡೆದು ಅಭಿವೃದ್ಧಿ ಪಡಿಸಬೇಕು ಎಂದರು.
ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ, ದುಡಿಯುವ ಕೈಗಳಿಗೆ ಕೆಲಸ ನೀಡಲು ಜಾರಿಗೆ ತಂದಿದ್ದ ಉದ್ಯೋಗ ಖಾತರಿ ಯೋಜನೆಯ ಮೂಲ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾಯಿಸಿ ಯೋಜನೆ ತಡೆಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ರುದ್ರಭೂಮಿ ಇಲ್ಲ. ಆದ್ದರಿಂದ ಆ ಸಂಬಂಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಸಮುದಾಯ ಭವನ, ವಸತಿ, ಆರೋಗ್ಯ, ಪಡಿತರ ವ್ಯತ್ಯಯ, ರೈತರಿಗೆ ವಿಮೆ, ರುದ್ರಭೂಮಿ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೂರಿವೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸಿಪಿಐ ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ್ ಮಾತನಾಡಿ, ಮನವಿಯಲ್ಲಿ ಸೂಚಿಸಿರುವ ಇಲಾಖೆಗಳ ಗಮನಕ್ಕೆ ತರಲಾಗುವುದು. ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 482 ವಸತಿಹೀನರ ಮನವಿ ಸ್ವೀಕಾರಗೊಂಡಿದ್ದು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಇ ಸ್ವತ್ತು ತಂತ್ರಾಂಶದ ಲೋಪದೋಷ ಸರಿಪಡಿಸುವ ಕೆಲಸ ಸರ್ಕಾರದ ಮಟ್ಟದಲ್ಲಿ ನಡೆದಿದೆ. 20 ದಿನದ ಒಳಗಾಗಿ ಸರಿ ಪಡಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನ 37 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. 128 ರುದ್ರಭೂಮಿ ಅಭಿವೃದ್ಧಿ ಪಡಿಸಲಾಗಿದೆ. 9 ಸಾವಿರ ಜನರು ವಿಬಿಜಿರಾಮ್‌ಜಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಶಿವರಾಮ್, ಚನ್ನವೀರ ಸ್ವಾಮಿ, ಸಲಾಂ ಸಾಬ್, ಚಮನ್ ಸಾಬ್, ಶರಣಪ್ಪ, ದ್ವಾರಕೀಶ್, ಕರಿಬಸವರಾಜ, ಪಿಎಸ್‌ಐ ವಿಜಯ್ ಕೃಷ್ಣ, ಪಿಡಿಒ ಹೇಮಂತ್ ಕುಮಾರ್, ಕಾರ್ಯದರ್ಶಿ ಚನ್ನಬಸಪ್ಪ, ಮುಖಂಡ ಬೊಮ್ಮಲಿಂಗಪ್ಪ, ಜ್ಯಾತಪ್ಪ, ಭರಮಣ್ಣ, ನಾಗರಾಜ್, ಚಂದ್ರಪ್ಪ, ಸೇರಿದಂತೆ ಇತರರು ಇದ್ದರು.