ನಮ್ಮ ಸಂವಿಧಾನವು ಪ್ರತಿಯೊಬ್ಬ ವಯಸ್ಕ ನಾಗರಿಕ ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ ಹಾಗೂ ಶಿಕ್ಷಣದ ಭೇದವಿಲ್ಲದೆ ಸಮಾನ ಮತದಾನದ ಹಕ್ಕನ್ನು ನೀಡಿದೆ.
ಹೂವಿನಹಡಗಲಿ: ಇಲ್ಲಿನ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಸಿಪಿಐ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಸಹಯೋಗದಲ್ಲಿ ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿಸಿಪಿಐ ಜಿಲ್ಲಾ ಖಜಾಂಚಿ ಸುರೇಶ ಹಲಗಿ ಮಾತನಾಡಿ, ಭಾರತದ ಸಂವಿಧಾನ ಪ್ರಜಾಪ್ರಭುತ್ವ ಮತ್ತು, ಜನರ ಮತದಾನದ ಹಕ್ಕು ರಕ್ಷಿಸುವ ದೃಷ್ಟಿಯಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಜತೆಗೆ ಎಸ್ಐಆರ್ ಪ್ರಕ್ರಿಯೆ ಸಂಪೂರ್ಣ ರದ್ಧು ಪಡಿಸಬೇಕೆಂದು ಒತ್ತಾಯಿಸಿದರು.ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದೆ. ನಮ್ಮ ಸಂವಿಧಾನವು ಪ್ರತಿಯೊಬ್ಬ ವಯಸ್ಕ ನಾಗರಿಕ ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ ಹಾಗೂ ಶಿಕ್ಷಣದ ಭೇದವಿಲ್ಲದೆ ಸಮಾನ ಮತದಾನದ ಹಕ್ಕನ್ನು ನೀಡಿದೆ. ಆದರೆ ಇಂದು ಈ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಪಾಯ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾಯತ್ತತೆ ಮತ್ತು ಉತ್ತರಧಾಯಿತ್ವವನ್ನೇ ದುರ್ಬಲಗೊಳಿಸುತ್ತಿದೆ. ಚುನಾವಣಾ ಆಯೋಗವು ಸ್ವತಂತ್ರವಾಗಿ ನಿಷ್ಪಕ್ಷ ಪಾತವಾಗಿ ಕಾರ್ಯನಿರ್ವಹಿಸಬೇಕಾದ ಸಾಂವಿಧಾನಿಕ ಸಂಸ್ಥೆಯಾಗಿದೆ. ಆದರೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 13ಕೋಟಿಗೂ ಹೆಚ್ಚು ಮತದಾರರ ಹೆಸರು ಅಳಿಸಲಾಗಿದೆ, ಇದು ಮತದಾರರಿಗೆ ಅನ್ಯಾಯವಾಗಿದೆ ಎಂದರು.
ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಜಂಗ್ಲಿಸಾಬ್. ತಾಲೂಕು ಖಜಾಂಚಿ ಡಿ.ಮುಕುಂದಗೌಡ. ಸದಸ್ಯ ಅನ್ವರ್ ಸಾಬ್, ಫಕ್ಕಿರೇಶ ಬೂದನೂರು, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಹೊಸಮನಿ ಸಿದ್ದಪ್ಪ, ಕಾರ್ಯದರ್ಶಿ ಶಿವರಾಜ ಇತರರಿದ್ದರು.