ಕರ್ನಾಟಕ, ಕೇರಳ ಸರ್ಕಾರದ ಹೋರಾಟ ಬೆಂಬಲಿಸಿ ಸಿಪಿಐಎಂ ಪ್ರತಿಭಟನೆ

| Published : Feb 09 2024, 01:49 AM IST

ಸಾರಾಂಶ

ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ನವದೆಹಲಿಯಲ್ಲಿ ನಡೆಸಲಿರುವ ಹೋರಾಟಕ್ಕೆ ಸಿಪಿಐಎಂ ಸಂಪೂರ್ಣ ಬೆಂಬಲ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿ ಖಂಡಿಸಿ ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ದೆಹಲಿ, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳ ಹೋರಾಟ ಬೆಂಬಲಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯ ಸರ್ಕಾರಗಳ ಮೇಲೆ ಒಕ್ಕೂಟ ಸರ್ಕಾರದ ತಾರತಮ್ಯ ನೀತಿ ಹಾಗೂ ಅಧಿಕಾರ ದುರುಪಯೋಗದ ಹಸ್ತಕ್ಷೇಪ ತಡೆಯುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ ಹಾಗೂ ಕೇರಳ ಸರ್ಕಾರ ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಸಿಪಿಐಎಂ ಸದಸ್ಯರು ಪ್ರತಿಭಟನೆ ನಡೆಸಿದರು.

ಪಟ್ಟಣದ ಅನಂತ್ ರಾಂ ವೃತ್ತ ಬಳಿ ಸೇರಿದ ಸಿಪಿಐಎಂ ಸದಸ್ಯರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ದೇವಿ ಮಾತನಾಡಿ, ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ನವದೆಹಲಿಯಲ್ಲಿ ನಡೆಸಲಿರುವ ಹೋರಾಟಕ್ಕೆ ಸಿಪಿಐಎಂ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿ ಖಂಡಿಸಿ ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ದೆಹಲಿ, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳ ಹೋರಾಟವನ್ನು ಬೆಂಬಲಿಸಲಾಗುವುದು ಎಂದರು.

ಕೇಂದ್ರ ಪ್ರಾಯೋಜಿತ ಯೋಜನೆಗಳ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಕ್ಕೂಟ ಸರ್ಕಾರ ಮಧ್ಯಪ್ರವೇಶ ಮಾಡಬಾರದು. ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ವಿಭಾಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಪಾಲರ ಹಸ್ತಕ್ಷೇಪ ಹಾಗೂ ಅವರ ಸಂವಿಧಾನಾತ್ಮಕ ಸ್ಥಾನದ ದುರುಪಯೋಗ ತಡೆಯಬೇಕು. ರಾಜ್ಯದ ವಿಶ್ವ ವಿದ್ಯಾಲಯಗಳ ವಿಷಯ ಕುಲಪತಿಗಳಾಗಿ ರಾಜ್ಯಪಾಲರ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ದಕ್ಷಿಣ ಭಾರತ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ. ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಬಿ.ವಿ.ಕುಮಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಿಪಿಐ ಎಂನ ಮಂಡಳಿ ಸದಸ್ಯ ಎನ್.ಎಲ್.ಭರತ್ ರಾಜ್, ಜಿಲ್ಲಾ ಸಮಿತಿ ಸದಸ್ಯ ಎನ್.ಲಿಂಗರಾಜಮೂರ್ತಿ, ತಾಲೂಕು ಕಾರ್ಯದರ್ಶಿ ಸುಶೀಲಾ, ಮುಖಂಡರಾದ ಆನಂದ, ಗುರುಸ್ವಾಮಿ, ಮಹಾದೇವಮ್ಮ, ತಿಮ್ಮೇಗೌಡ, ಶಿವಕುಮಾರ್, ಸುನಂದಮ್ಮ, ದೇವರಾಜ್, ಲಿಂಗರಾಜ್ ಭಾಗವಹಿಸಿದ್ದರು.