ಸಾರಾಂಶ
ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಅವರನ್ನು ಸಿಪಿಐಎಂ ಬೆಂಬಲಿಸಲಿದ್ದು, ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸೇರಿದಂತೆ ಪದವೀಧರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಭಾಗದ ಶೈಕ್ಷಣಿಕ ಪ್ರಗತಿ ನೆಲೆಯಲ್ಲಿ ಸದನದಲ್ಲಿ ಧ್ವನಿ ಎತ್ತುವವರಿಲ್ಲ. ಈ ಹಿಂದೆ ಚುನಾವಣೆಯಲ್ಲಿ ಗೆದ್ದವರು ಈ ಭಾಗದ ಕಡೆ ತಿರುಗಿಯೂ ನೋಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾರಾ ಪ್ರತಾಪ ರೆಡ್ಡಿ ಅವರನ್ನು ಬೆಂಬಲಿಸುವುದಲ್ಲದೆ, ಅವರ ಗೆಲುವಿಗೆ ಸಂಬಂಧಿಸಿದಂತೆ ಕ್ಷೇತ್ರ ವ್ಯಾಪ್ತಿಯ ಎಲ್ಲ ಜಿಲ್ಲೆಗಳಿಗೆ ತೆರಳಿ ಪ್ರಚಾರ ಕೈಗೊಳ್ಳಲಾಗುವುದು ಎಂದರು.ಪ್ರತಾಪ ರೆಡ್ಡಿ ಅವರ ರಾಜಕೀಯ ಹೋರಾಟದ ಜತೆಗೆ ಸಾಮಾಜಿಕ ಸಮಸ್ಯೆಗಳಿಗೆ ಈ ಹಿಂದಿನಿಂದಲೂ ಸ್ಪಂದಿಸಿರುವುದು ಮತ್ತು ಜನಪರ ಚಳವಳಿಗಳನ್ನು ಬೆಂಬಲಿಸುತ್ತಾ ಬಂದಿರುವುದನ್ನು ಪರಿಗಣಿಸಿ ಅವರನ್ನು ಬೆಂಬಲಿಸಿ, ಗೆಲುವಿಗೆ ಶ್ರಮಿಸಲು ಪಕ್ಷ ನಿರ್ಧರಿಸಿದೆ ಎಂದು ಎಸ್.ವೈ. ಗುರುಶಾಂತ್ ತಿಳಿಸಿದರು.
ನಾರಾ ಪ್ರತಾಪ ರೆಡ್ಡಿ ಮಾತನಾಡಿ, ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಹಿಂದಿನ ಸಲವೂ ಸ್ಪರ್ಧಿಸಿದ್ದೆ. ಆದರೆ, ಕೆಲವೇ ಮತಗಳ ಅಂತರದಲ್ಲಿ ಸೋಲಾಯಿತು. ಪ್ರಥಮ ಪ್ರಾಶಸ್ತ್ಯ ಮತಗಳು ನನಗೆ ಹೆಚ್ಚಾಗಿ ಬಂದಿದ್ದವು. ಕುಲಗೆಟ್ಟ ಮತಗಳಿಂದ ಪರಾಭವಗೊಳ್ಳಬೇಕಾಯಿತು. ಈ ಬಾರಿ ಆಮ್ ಆದ್ಮಿ ಪಕ್ಷ, ಸಿಪಿಐಎಂ ಸೇರಿದಂತೆ ಅನೇಕ ಜನಪರ ಸಂಘಟನೆಗಳು ಬೆಂಬಲಿಸಿದ್ದು, ಗೆಲುವಿಗೆ ಶ್ರಮಿಸುತ್ತಿವೆ ಎಂದರು.ವೆಬ್‌ಕ್ಯಾಮರಾ ಯಾಕೆ ಹಾಕಬೇಕಿತ್ತು?: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಸಿಸಿ ಕ್ಯಾಮೆರಾ ಜತೆ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದೆ. ರಾಜ್ಯದಲ್ಲಿ ಎಲ್ಲೂ ಹಾಕದೇ ಈ ಭಾಗದಲ್ಲಿ ಮಾತ್ರ ಏಕೆ ಈ ವ್ಯವಸ್ಥೆ ಮಾಡಿದರು ಎಂದು ಪ್ರತಾಪ ರೆಡ್ಡಿ ಪ್ರಶ್ನಿಸಿದರು.
ವೆಬ್ ಕಾಸ್ಟಿಂಗ್‌ನಿಂದ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಪರಿವೀಕ್ಷಕರಾಗಿದ್ದ ಶಿಕ್ಷಕರಿಗೆ ಮಾನಸಿಕ ಒತ್ತಡವಾಗಿದೆ. ಈ ಬಗ್ಗೆ ಯಾವ ಜನಪ್ರತಿನಿಧಿಯೂ ಧ್ವನಿ ಎತ್ತಲಿಲ್ಲ. ಶಿಕ್ಷಕರು ಹಾಗೂ ಉಪನ್ಯಾಸಕರ ಸಮಸ್ಯೆಯನ್ನು ಕೇಳುವವರಿಲ್ಲವಾಗಿದೆ. ಚುನಾವಣೆ ಕರ್ತವ್ಯ, ಪರೀಕ್ಷೆ ಮತ್ತು ಮೌಲ್ಯಮಾಪನ ಮಾಡುವವರಿಗೆ ಒತ್ತಡ ಹಾಕಲಾಗುತ್ತಿದೆ. ಇದರಿಂದ ಶಿಕ್ಷಕ ಸಮುದಾಯ ಮಾನಸಿಕವಾಗಿ ಕುಗ್ಗಿ ಹೋಗಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಪ್ರತಿ ಹಂತದಲ್ಲೂ ನಿರ್ಲಕ್ಷ್ಯಕ್ಕೆ ಗುರಿ ಮಾಡಲಾಗುತ್ತಿದ್ದು, ಇದನ್ನು ಪ್ರಶ್ನಿಸುವವರಿಲ್ಲವಾಗಿದೆ ಎಂದು ಹೇಳಿದರು.ಜೂ.15ರ ವೇಳೆಗೆ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಪಕ್ಷಗಳು ಬೆಂಬಲಿಸುವ ಜತೆಗೆ ಗೆಲುವಿಗೆ ಶ್ರಮಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ ಎಂದರು.
ಸಿಪಿಐಎಂ ಪಕ್ಷದ ಜಿಲ್ಲಾ ಪ್ರಮುಖರಾದ ಜೆ. ಸತ್ಯಬಾಬು, ಚಂದ್ರಕುಮಾರಿ ಸುದ್ದಿಗೋಷ್ಠಿಯಲ್ಲಿದ್ದರು.