ಮಾಂಜಾದಾರದಿಂದ ಪಕ್ಷಿ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಅಪಾಯದ ಕುರಿತು "ಕನ್ನಡಪ್ರಭ " ಸತತ ಎರಡು ದಿನ ಪ್ರಕಟಿಸಿದ ವಿಶೇಷ ವರದಿಗೆ ಕಮಿಷನರ್‌ ಸ್ಪಂದಿಸಿದ್ದಾರೆ.

ಹುಬ್ಬಳ್ಳಿ:

ಮಾಂಜಾದಾರದಿಂದ ಪಕ್ಷಿ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಅಪಾಯದ ಕುರಿತು "ಕನ್ನಡಪ್ರಭ " ಸತತ ಎರಡು ದಿನ ಪ್ರಕಟಿಸಿದ ವಿಶೇಷ ವರದಿಗೆ ಸ್ಪಂದಿಸಿರುವ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣೆಗಳಿಗೆ ಮಾಂಜಾದಾರ ಮಾರಾಟದ ಅಂಗಡಿಗಳನ್ನು ಪರಿಶೀಲನೆಗೆ ಸೂಚಿಸಿದ್ದಾರೆ.

ಅ. 6ರಂದು "ನಿಷೇಧವಿದ್ದರೂ ಮಾಂಜಾದಾರಕ್ಕೆ ಬೀಳದ ಬ್ರೇಕ್‌ ", ಹಾಗೂ ಅ.7ರಂದು "ಮಾಂಜಾದಾರ ಮಾರಾಟಕ್ಕೆ ಬೀಳುವುದೇ ಕಡಿವಾಣ? " ಶೀರ್ಷಿಕೆಯಡಿ ಕನ್ನಡಪರಭ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಕಮಿಷನರ್‌, ಮಾಂಜಾದಾರ ಮಾರಾಟ ಅಥವಾ ಬಳಕೆ ಕಂಡುಬಂದರೆ 112ಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ದೂರು ಅಥವಾ ಮಾಹಿತಿ ಆಧರಿಸಿ ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಮಾಂಜಾದಾರ ವಶಪಡಿಸಿಕೊಳ್ಳುವುದಲ್ಲದೆ, ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಮಾಂಜಾದಾರದ ಅಪಾಯದ ಕುರಿತು ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲೂ ಜಾಗೃತಿ ಸಂದೇಶ ಹಾಗೂ ಪೋಸ್ಟರ್‌ಗಳನ್ನು ಹಂಚಿಕೊಂಡಿದೆ.

ಸರ್ಕಾರ ಮಾಂಜಾದಾರ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ. ಹು-ಧಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾಂಜಾದಾರ ಮಾರಾಟದ ಮಾಹಿತಿ ದೊರೆತರೆ ಪರಿಶೀಲಿಸಿ, ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಭೂಷಣ್ ಬೊರಸೆ, ಪೊಲೀಸ್ ಆಯುಕ್ತರು