ಕಿಕ್ಕೇರಿ ಹೋಬಳಿಯಾದ್ಯಂತ ತೊಟ್ಟಿಲು ಗಂಗೆ ಗೌರಿ ಮೆರವಣಿಗೆ

| Published : Sep 07 2024, 01:33 AM IST

ಸಾರಾಂಶ

ಕಿಕ್ಕೇರಿ ಪಟ್ಟಣದ ಬಳೆಗಾರ ವಂಶದ ಬಸೆಟ್ಟಿ ಅಯ್ಯನವರ ನಾಗೇಂದ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಪವಿತ್ರ ಗಂಗೆ ಪೂಜೆ ನೆರವೇರಿಸಿದರು. ಗಂಗೆಯಲ್ಲಿ ಮುಳುಗಿ ಕೈಗೆ ಸಿಕ್ಕ ಪವಿತ್ರ ವಸ್ತುವನ್ನು ಹಳದಿ ವಸ್ತ್ರದಲ್ಲಿ ಕಟ್ಟಿಕೊಂಡು ತಂದು ಮನೆಯಲ್ಲಿ ಗಂಗೆಗೌರಿ ಪೀಠದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪರಿಮಳ ಪುಷ್ಪಗಳಿಂದ ಶೃಂಗರಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯಾದ್ಯಂತ ಗಂಗೆ-ಗೌರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಣೆ ಮಾಡಲಾಯಿತು.

ಹೋಬಳಿಯ ಜನತೆ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲು ಮುಂದಾದರು. ಮನೆ ಮನೆಗಳಲ್ಲಿ ಗೌರಿ ಮೂರ್ತಿ, ಮರಳು ಗೌರಮ್ಮನನ್ನು ಪ್ರತಿಷ್ಠಾಪಿಸಿ ಪೂಜಿಸಿದರು.

ಪಟ್ಟಣದ ಬಳೆಗಾರ ವಂಶದ ಬಸೆಟ್ಟಿ ಅಯ್ಯನವರ ನಾಗೇಂದ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಪವಿತ್ರ ಗಂಗೆ ಪೂಜೆ ನೆರವೇರಿಸಿದರು. ಗಂಗೆಯಲ್ಲಿ ಮುಳುಗಿ ಕೈಗೆ ಸಿಕ್ಕ ಪವಿತ್ರ ವಸ್ತುವನ್ನು ಹಳದಿ ವಸ್ತ್ರದಲ್ಲಿ ಕಟ್ಟಿಕೊಂಡು ತಂದು ಮನೆಯಲ್ಲಿ ಗಂಗೆಗೌರಿ ಪೀಠದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪರಿಮಳ ಪುಷ್ಪಗಳಿಂದ ಶೃಂಗರಿಸಿದರು.

ವಿವಿಧ ಹಣ್ಣುಹಂಪಲುಗಳನ್ನು ಇಟ್ಟು ನೈವೇದ್ಯ ಅರ್ಪಿಸಿದರು. ಮಹಿಳೆಯರು ಗಂಗೆ-ಗೌರಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಬಾಗಿನ ಅರ್ಪಿಸಿ ಮುಡಿತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಗಂಗಾಮತಸ್ಥ ಸಮುದಾಯದವರು ಅಮಾನಿಕೆರೆಯಲ್ಲಿ 3 ಬಾರಿ ಮುಳುಗಿ ಕೈಗೆ ಸಿಕ್ಕ ವಸ್ತುವನ್ನು ಗಂಗೆ ಗೌರಿ ಅಮ್ಮನವರಂತೆ ಹಳದಿ ಬಟ್ಟೆಯಲ್ಲಿ ಕಟ್ಟಿ ಪ್ರತ್ಯೇಕವಾಗಿ ತೊಟ್ಟಿಲುವಿನಲ್ಲಿ ಪ್ರತಿಷ್ಠಾಪಿಸಿದರು.

ದೇವಿಯ ಎರಡು ತೊಟ್ಟಿಲುಗಳನ್ನು ಸಾಂಪ್ರದಾಯಿಕವಾಗಿ ಅಡ್ಡೆಯಲ್ಲಿ ಇಟ್ಟುಕೊಂಡು ಸಾಗಿದರು. ದೇವಿಯ ಜೋಡಿ ತೊಟ್ಟಿಲುಗಳ ಮೆರವಣಿಗೆ ಬಸವಣ್ಣನಗುಡಿ, ರಥಬೀದಿ, ಹೊಸಬೀದಿ, ಬ್ರಹ್ಮೇಶ್ವರದೇಗುಲ, ಯೋಗನರಸಿಂಹಸ್ವಾಮಿ ಬೀದಿಯಲ್ಲಿ ಸಾಗಿತು.

ಮಹಿಳೆಯರು, ಯುವತಿಯರು, ಪುಟಾಣಿ ಮಕ್ಕಳು ಹೊಸ ಬಟ್ಟೆತೊಟ್ಟು ಮನೆ ಎದುರು ರಂಗೋಲಿ ಬಿಡಿಸಿ ದೇವಿಯನ್ನು ಬರಮಾಡಿಕೊಂಡರು. ಪ್ರತಿ ಮನೆಗಳ ಮುಂದೆ ದೇವಿಗೆ ಬಾಗಿನ ಅರ್ಪಿಸಿ, ಹಣ್ಣು ಕಾಯಿ ನೀಡಿ ಕರ್ಪೂರದ ಆರತಿ ಬೆಳಗಿದರು.

ಮಹಿಳೆಯರು ಮನೆಮನೆಗೆ ತೆರಳಿ ಹಬ್ಬದ ಸವಿಯನ್ನು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಾಗಿನ ಅರ್ಪಿಸಿ, ಹಸಿರು ಬಳೆ ತೊಡಿಸಿ ಹಬ್ಬದ ಸಂಭ್ರಮ ಸವಿದರು. ಹಲವರು ಸುಮಂಗಲಿ ಪೂಜೆಯನ್ನು ನೆರವೇರಿಸಿದರು.