ರಾಮ ನವಮಿ: ಬಾಲರಾಮ, ಶ್ರೀ ಬಾಲ ಲಕ್ಷ್ಮಣನ ತೊಟ್ಟಿಲು ಸೇವೆ

| Published : Apr 18 2024, 02:19 AM IST

ಸಾರಾಂಶ

ರಾಮನವಮಿ ಪ್ರಯುಕ್ತ ಬೇಲೂರಿನ ಶ್ರೀ ಪ್ರಸನ್ನ ಸೀತಾರಾಮಾಂಜನೇಯ ದೇಗುಲದಲ್ಲಿ ಸೀತಾರಾಮಾಂಜನೇಯ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀಬಾಲರಾಮ ಹಾಗೂ ಶ್ರೀ ಬಾಲ ಲಕ್ಷ್ಮಣನ ತೊಟ್ಟಿಲು ಸೇವೆ ನೆರವೇರಿತು.

ಸೀತಾರಾಮಾಂಜನೇಯ ಭಜನಾ ಮಂಡಳಿ ಆಯೋಜನೆ । ವಿವಿಧ ಪೂಜೆ, ಕೀರ್ತನೆ । ಪ್ರಸಾದ ವಿನಿಯೋಗ

ಕನ್ನಡಪ್ರಭ ವಾರ್ತೆ ಬೇಲೂರು

ರಾಮನವಮಿ ಪ್ರಯುಕ್ತ ಶ್ರೀ ಪ್ರಸನ್ನ ಸೀತಾರಾಮಾಂಜನೇಯ ದೇಗುಲದಲ್ಲಿ ಸೀತಾರಾಮಾಂಜನೇಯ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀಬಾಲರಾಮ ಹಾಗೂ ಶ್ರೀ ಬಾಲ ಲಕ್ಷ್ಮಣನ ತೊಟ್ಟಿಲು ಸೇವೆ ವಿಶೇಷವಾಗಿ ನೆರವೇರಿಸಲಾಯಿತು.

ಇತಿಹಾಸ ಪ್ರಸಿದ್ಧ ಕೋಟೆ ಬಾಗಿಲು ಅಂಜನೇಯ ಸ್ವಾಮಿ ಸನ್ನಿಧಾನ ಎಂದೇ ಪ್ರಸಿದ್ದವಾಗಿರುವ ಸೀತಾರಾಮಾಂಜನೇಯ ದೇಗುಲದಲ್ಲಿ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ಸೀತಾರಾಮಾಂಜನೇಯನಿಗೆ ವಿಶೇಷವಾದ ಅಭಿಷೇಕ, ಹೋಮ, ಸಾಮೂಹಿಕ ನವಗ್ರಹ ಹೋಮ ಹಾಗೂ ತಿಲಕ ಹೋಮವನ್ನು ಆಯೋಜಿಸುವ ಮೂಲಕ ವಿಶೇಷ ಪೂಜೆ ವಿಧಿ ವಿಧಾನಗಳನ್ನು ಶ್ರೀ ವೇದಬ್ರಹ್ಮ ಕೆ.ಆರ್.ಮಂಜುನಾಥ್ ಹಾಗೂ ಪ್ರಧಾನ ಅರ್ಚಕ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಇದೇ ಪ್ರಥಮ ಬಾರಿಗೆ ಮದ್ರಾಸಿನ ಸರೋಜ ಹಾಗೂ ಉಪೆಂದ್ರ ದಂಪತಿ ಅಯೋದ್ಯೆಯಲ್ಲಿನ ಶ್ರೀ ಬಾಲರಾಮನ ಮೂರ್ತಿ ಹಾಗೂ ಲಕ್ಷ್ಮಣ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಬಂದ ಮುತ್ತೈದೆಯರಿಂದ ತೊಟ್ಟಿಲ ಸೇವೆ ನೆರವೇರಿಸಿ ಪೂಜಿಸಿದರು.

ಈ ವೇಳೆ ಮಾತನಾಡಿದ ಸೀತಾರಾಮಾಂಜನೇಯ ದೇಗುಲದ ಅಧ್ಯಕ್ಷ ರಘುಪತಿ, ‘ಈ ಹಿಂದೆ ನಮ್ಮ ತಂದೆಯವರು ದೇವಾಲಯವನ್ನು ಕಟ್ಟಿ ವಿಶೇಷ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿಕೊಂಡು ಬಂದಿದ್ದರು. ಅದರಂತೆ ಇಡೀ ತಾಲೂಕಿನಲ್ಲಿ ಊರ ಬಾಗಿಲ ಸೀತಾರಾಮಾಂಜನೇಯ ಎಂದು ಹೆಸರು ಪಡೆದಿದೆ. ನಮ್ಮ ಭಜನಾ ಮಂಡಳಿಗೆ ೫೦ನೇ ವರ್ಷದ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಮ ನವಮಿ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸುಮಾರು ೧೫ ದಿನಗಳ ಕಾಲ ವಿಶೇಷ ಪೂಜೆ, ಭರತನಾಟ್ಯ, ಹರಿಕಥೆ, ಗಮಕ ಸೇರಿದಂತೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವೇದಬ್ರಹ್ಮ ಕೆ.ಆರ್.ಮಂಜುನಾಥ್ ಮಾತನಾಡಿ, ರಾಮ ನವಮಿಯನ್ನು ವಿಶೇಷವಾಗಿ ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಬರಗಾಲ ಮತ್ತು ಮಳೆ ಇಲ್ಲದ ಹಿನ್ನೆಲೆ ಶ್ರೀರಾಮ ಹಾಗೂ ಆಂಜನೇಯ ಮೂರ್ತಿಗೆ ವಿಶೇಷ ಸಂಕಲ್ಪ ಮಾಡಲಾಗಿದೆ ಎಂದರು.

ಈ ವೇಳೆ‌ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ವಿಶೇಷವಾಗಿ ರಾಮ ಸಂಕೀರ್ತನಾ ಕೀರ್ತನೆಯನ್ನು ನಡೆಸಲಾಯಿತು.

ದೇಗುಲದ ಉಪಾಧ್ಯಕ್ಷ ಮುರುಳಿ, ಪ್ರಧಾನ ಅರ್ಚಕ ನಂಜುಂಡಸ್ವಾಮಿ, ಶ್ರೀರಾಮ ಲಕ್ಷ್ಮಣ ವಿಗ್ರಹ ದಾನಿಗಳಾದ ಸರೋಜ ಉಪೇಂದ್ರರಾವ್ ಹಾಗೂ ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ ಹಾಜರಿದ್ದರು.ಶ್ರೀ ಪ್ರಸನ್ನ ಸೀತಾರಾಮಾಂಜನೇಯ ದೇಗುಲದ ಶ್ರೀಬಾಲರಾಮ ಹಾಗೂ ಶ್ರೀ ಬಾಲ ಲಕ್ಷ್ಮಣನ ತೊಟ್ಟಿಲು ಸೇವೆ ನೆರವೇರಿಸಲಾಯಿತು.