ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೂಲಸೌಲಭ್ಯ ಕೊರತೆ ಇರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಮನಸೋಚ್ಛೆ ಸೀಟ್ ಗಳ ಹೆಚ್ಚಳಕ್ಕೆ ಕಡಿವಾಣ ಹಾಕಲು ಮೈಸೂರು ವಿವಿ ಶೈಕ್ಷಣಿಕ ಮಂಡಳಿಯು ನಿರ್ಧರಿಸಿದೆ.ಕ್ರಾಫರ್ಡ್ ಭವನದಲ್ಲಿ ಮಂಗಳವಾರ ನಡೆದ ಮೈಸೂರು ವಿವಿ ಶೈಕ್ಷಣಿಕ ಮಂಡಳಿಯ 2ನೇ ಸಾಮಾನ್ಯ ಸಭೆಯಲ್ಲಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬಿ.ಕಾಂ ಕೋರ್ಸ್ಪ್ರಥಮ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯಾಮಿತಿಯನ್ನು 690 ರಿಂದ 1100ಕ್ಕೆ ಹೆಚ್ಚಳಕ್ಕೆ ವಿಷಯ ಮಂಡಿಸಲಾಯಿತು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರು, ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಗೃಹ, ವಿಶ್ರಾಂತಿ ಕೊಠಡಿ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಲ್ಲ. ಸರ್ಕಾರಿ ಕಾಲೇಜು ಎಂಬ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಸೀಟ್ ಹೆಚ್ಚಳ ಸರಿಯಲ್ಲ. ಇದರಿಂದ ವಿದ್ಯಾರ್ಥಿನಿಯರಿಗೂ ತೊಂದರೆಯಾಗಲಿದೆ. ಇದಕ್ಕೆ ಸರ್ಕಾರವನ್ನು ಅಲ್ಲ, ವಿಶ್ವವಿದ್ಯಾಲಯವನ್ನೇ ಹೊಣೆ ಮಾಡಲಾಗುತ್ತದೆ ಎಂದರು.ಸಮಸ್ಯೆಯಾದರೆ ಸರ್ಕಾರಕ್ಕೆ ಪತ್ರ ಬರೆಯಲ್ಲ. ನೇರವಾಗಿ ಯುಜಿಸಿಗೆ ಪತ್ರ ಬರೆಯುತ್ತಾರೆ. ಆಗ ವಿವಿಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ, ಮಹಾರಾಣಿ ಕಾಲೇಜು ಮಾತ್ರವಲ್ಲದೇ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮನಸೋಚ್ಛೆ ಸೀಟ್ ಹೆಚ್ಚಳಕ್ಕೆ ನಿಯಂತ್ರಣ ಹೇರುವುದು ಅಗತ್ಯ ಇದೆ ಎಂದು ಅವರು ತಿಳಿಸಿದರು.ಮಹಾರಾಣಿ ಕಾಲೇಜುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಸೀಟು ಹೆಚ್ಚಳಕ್ಕೆ ಬೇರೆ ಪದವಿ ಕಾಲೇಜುಗಳಿಂದ ವಿರೋಧ ಇದೆ. ಈ ಕ್ರಮದಿಂದ ಉಳಿದ ಕಾಲೇಜುಗಳಲ್ಲಿ ದಾಖಲಾತಿ ಕಡಿಮೆ ಆಗಲಿದೆ. ಹೀಗಾಗಿ, ಒಂದೇ ಕಾಲೇಜಿನ ಸೀಟ್ ಗಳ ಹೆಚ್ಚಳ ಕ್ರಮ ಕೈಬಿಡಬೇಕು. ಇದರಿಂದ ಇತರ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ದೊರೆಯಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಹೇಳಿದರು.ಈ ಕುರಿತು ಚರ್ಚೆಯ ಬಳಿಕ ಸರ್ಕಾರಿ ಪದವಿ ಕಾಲೇಜುಗಳ ಸೀಟ್ ಗಳ ಹೆಚ್ಚಳ ಮಿತಿಯನ್ನು ಶೇ.10 ರಿಂದ 15ಕ್ಕೆ ಮಿತಿಗೊಳಿಸಲು ಸಭೆ ತೀರ್ಮಾನಿಸಿತು. ಅಲ್ಲದೆ, ಮಹಾರಾಣಿ ವಾಣಿಜ್ಯ ಕಾಲೇಜಿನ ಬಿ.ಕಾಂ. ಕೋರ್ಸ್ಪ್ರಥಮ ವರ್ಷಕ್ಕೆ ಹಾಲಿ ಶಾಶ್ವತ ಸಂಯೋಜನೆ 240, ತಾತ್ಕಾಲಿಕ ಸಂಯೋಜನೆ 450 ಸೀಟ್ ಗಳಿಗೆ ನಿಗದಿಪಡಿಸಲಾಗಿದೆ. 2024- 25ನೇ ಸಾಲಿನಲ್ಲಿ 410 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರವೇಶಾತಿ ಮಾಡಿಕೊಳ್ಳಲಾಗಿದೆ. ಒಟ್ಟು 1100 ವಿದ್ಯಾರ್ಥಿಗಳ ಪ್ರವೇಶಾತಿಯಾಗಿದೆ. ಹೆಚ್ಚುವರಿ ಪ್ರವೇಶಾತಿಗೆ ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತದೃಷ್ಟಿಯಿಂದ ಅನುಮೋದನೆ ನೀಡಲಾಯಿತು.ಕುಲಸಚಿವೆ ವಿ.ಆರ್. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಮೊದಲಾದವರು ಇದ್ದರು.----ಬಾಕ್ಸ್... ವಿವಿಧ ಕೋರ್ಸ್ ಗಳಿಗೆ ಅನುಮೋದನೆರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಾಂತರ ವರದಿ ಆಧರಿಸಿ ಸರ್ಕಾರದ ಹೊರಡಿಸಿರುವ ಆದೇಶದ ಪ್ರಕಾರ ಪರಿಸರ ಅಧ್ಯಯನ ವಿಷಯದ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು. ಕುವೈತ್ ನ ಯುನಿವರ್ಸಲ್ ಇನ್ಸ್ ಟಿಟ್ಯೂಟ್ ಫಾರ್ ಪ್ರೈವೇಟ್ ಟ್ರೈನಿಂಗ್ ಸಂಸ್ಥೆಗೆ ವಿಶೇಷ ಕಾರ್ಯಕ್ರಮದಡಿ ಬಿ.ಎ (ಇಂಗ್ಲಿಷ್ ಸಾಹಿತ್ಯ ಮತ್ತು ಡಿಜಿಟಲ್ ಮಿಡಿಯಾ ಕಮ್ಯೂನಿಕೇಷನ್), ಮನೋಶಾಸ್ತ್ರ, ಬಿಸಿಎ.( ಕೃತಕ ಬುದ್ಧಿಮತ್ತೆ, ಡಾಟಾ ಸೈನ್ಸ್) ಕೋರ್ಸ್ ಗಳಿಗೆ ವಿವಿಯಿಂದ ಮಾನ್ಯತೆ ನೀಡಿದ್ದು, ಪ್ರಥಮ ವರ್ಷ ಪಠ್ಯಕ್ರಮ, ಪರಿನಿಯಮಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಮೈಸೂರಿನ ಸಿಪೆಟ್ ಕಾಲೇಜು, ವಿದ್ಯಾರಣ್ಯಪುರಂನ ಇಂಟರ್ ನ್ಯಾಷನಲ್ ಇನ್ಸ್ ಟಿಟ್ಯೂಟ್ ಫಾರ್ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಆ್ಯಂಡ್ ರಿಸರ್ಚ್ ಸೆಂಟರ್, ಹೂಟಗಳ್ಳಿಯ ಗೆಟ್ಸ್ ಅಕಾಡೆಮಿ, ಕಾವೇರಿ ಕಾಲೇಜ್ ಆಫ್ ಲೈಫ್ ಸೈನ್ಸ್ ಅಂಡ್ ಮ್ಯಾನೇಜ್ ಮೆಂಟ್, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ ವೋಗ್ ಇನ್ಸ್ ಟಿಟ್ಯೂಟ್ ಆಫ್ ಡಿಸೈನ್ ಕಾಲೇಜಿನಲ್ಲಿ ಪ್ರಾರಂಭಿಸಿರುವ ವಿಶೇಷ ಕೋರ್ಸ್ ಗಳಿಗೂ ಅನುಮೋದಿಸಲಾಯಿತು.----ಕೋಟ್...ಮೈಸೂರು ವಿವಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಸೆಮಿಸ್ಟರ್ ವೇಳಾಪಟ್ಟಿಯನ್ನು ಹಿಂದಕ್ಕೆ- ಮುಂದಕ್ಕೆ ಹಾಕುವ ಪ್ರವೃತಿಯನ್ನು ಕೈಬಿಡಲಾಗುವುದು. ಸಕಾಲಕ್ಕೆ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು. ಜೊತೆಗೆ ಬಿಎ, ಬಿ.ಕಾಂ, ಬಿ.ಎಸ್ಸಿ ಕೋರ್ಸ್ ಗಳ ಪ್ರವೇಶಾತಿ ವೇಳಾಪಟ್ಟಿ ಇನ್ನೂ 2- 3 ದಿನಗಳಲ್ಲಿ ಅಂತಿಮವಾಗಲಿದೆ.- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು