ವಿದೇಶಿ ಶಿಕ್ಷಣ ಮಾದರಿಯನ್ನು ನಮ್ಮಲ್ಲಿ ಅಳವಡಿಸುವ ಮುನ್ನ ಅವಲೋಕಿಸಬೇಕು

| Published : Jan 19 2025, 02:19 AM IST

ವಿದೇಶಿ ಶಿಕ್ಷಣ ಮಾದರಿಯನ್ನು ನಮ್ಮಲ್ಲಿ ಅಳವಡಿಸುವ ಮುನ್ನ ಅವಲೋಕಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಲ್ಲಿ ಬೋಧಕರ ಕೊರತೆ ಇದೆ. ಅತಿಥಿ ಉಪನ್ಯಾಸಕರನ್ನು ಅವಲಂಬಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದೇಶಿ ಶಿಕ್ಷಣದ ಮಾದರಿಯನ್ನು ನಮ್ಮ ದೇಶದಲ್ಲಿ ಅಳವಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವಲೋಕಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.ನಗರದ ಕ್ರಾಫರ್ಡ್ ಭವನದಲ್ಲಿ ಶನಿವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 105ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಬೋಧಕರ ಕೊರತೆ ಇದೆ. ಅತಿಥಿ ಉಪನ್ಯಾಸಕರನ್ನು ಅವಲಂಬಿಸಿದ್ದೇವೆ. ಮೂಲಸೌಕರ್ಯದ ಕೊರತೆ ಇದೆ. ಇವುಗಳಿಗೆ ಪರಿಹಾರ ಕಂಡು ಹಿಡಿಯದೇ ಬೇರೆ ದೇಶದ ಶಿಕ್ಷಣ ಪದ್ಧತಿ ಅಳವಡಿಗೆ ಸಾಧ್ಯವಾಗುವುದೇ ಎಂದು ಪ್ರಶ್ನಿಸಿದರು.ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಇದ್ದ ಕಾರಣಕ್ಕೆ ಪ್ರತಿಭಾವಂತರು ವಿದೇಶಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗಿದೆ. ನಮ್ಮ ಸರ್ಕಾರದ ಉದ್ದೇಶ ಕೇವಲ ಶಿಕ್ಷಣ ಕೊಟ್ಟು ಪದವಿ ನೀಡುವುದಲ್ಲ. ಗಳಿಸಿದ ಜ್ಞಾನದ ಆಧಾರದ ಮೇಲೆ ಉದ್ಯೋಗ ದೊರೆಯಬೇಕು. ಕೌಶಲಕ್ಕೆ ಆದ್ಯತೆ ಕೊಟ್ಟಿದ್ದೇವೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದ್ದೇವೆ. ವಿಶ್ವ ಬ್ಯಾಂಕ್‌ ನಿಂದ 2500 ಕೋಟಿ ರೂ. ಸಾಲ ಪಡೆಯಲು ನಿರ್ಧಾರ ಮಾಡಲಾಗಿದೆ. ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.ಕೇಂದ್ರ ಸರ್ಕಾರದ ವಿಶ್ವವಿದ್ಯಾನಿಲಯಗಳ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ಸಾರ್ವಜನಿಕರಿಗೆ ಉತ್ತರ ಕೊಡುವುದು ರಾಜ್ಯ ಸರ್ಕಾರವಾದ್ದರಿಂದ ಕೇಂದ್ರ ಸರ್ಕಾರದ ನಡೆ ಅನುಚಿತ ಎಂದು ಅವರು ಹೇಳಿದರು.ಪೋಷಕರು ತಮ್ಮ ಹೆಣ್ಣು ಮಕ್ಕಳ ಮೇಲೆ ಇಟ್ಟಿರುವಂತಹ ನಂಬಿಕೆ ಇಂದು ಉನ್ನತ ಶಿಕ್ಷಣವನ್ನು ಹೆಣ್ಣು ಮಕ್ಕಳು ಪಡೆದು ಎಲ್ಲಾ ರಂಗಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಇದು ಸಮಾಜದಲ್ಲಿ ಬದಲಾವಣೆ ತರುವಂತಹ ಒಂದು ದಿಟ್ಟ ಹೆಜ್ಜೆಯಾಗಿದೆ. ನಾವೆಲ್ಲರೂ ಹಾಗೂ ಇಡೀ ಸಮಾಜ ಹೆಮ್ಮೆ ಪಡುವಂತಹ ವಿಚಾರವಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದು, ವಿದೇಶದಿಂದಲೂ ವಿದ್ಯಾರ್ಥಿಗಳು ಅಧ್ಯಯನಕ್ಕೆ ನಮ್ಮ ದೇಶಕ್ಕೆ ಬರುತ್ತಾರೆ ಎಂದು ಅವರು ತಿಳಿಸಿದರು.ಶಿಕ್ಷಣ ಎನ್ನುವಂತದರಲ್ಲಿ ಬಹಳಷ್ಟು ನಿರೀಕ್ಷೆಗಳು ಇರುತ್ತವೆ. ಪದವಿ ಪಡೆದಂತಹ ಹಲವರು ಇಂದು ನಿರುದ್ಯೋಗಿಗಳು ಆಗುತ್ತಿದ್ದಾರೆ. ಉದ್ಯೋಗ ಅವಲಂಬಿತ ಆಧಾರವಾಗಿರುವಂತಹ ಶಿಕ್ಷಣ ನೀಡುವಂತೆ ಆಗಬೇಕು. ನಮ್ಮೆಲ್ಲರ ಜವಾಬ್ದಾರಿ ಕೇವಲ ಪದವಿ ಕೊಡುವಂತಹದಲ್ಲ. ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಉದ್ಯೋಗವನ್ನು ಪಡೆಯುವಂತಹ ಶಿಕ್ಷಣವನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವಂತಹ ಶಿಕ್ಷಣವನ್ನು ನೀಡಬೇಕಿದೆ ಎಂದು ಅವರು ಹೇಳಿದರು.