ಸಾರಾಂಶ
ಕಸಬ ಹೋಬಳಿಯ ಪ್ರೌಢಶಾಲೆ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಬಿಇಒ ಸಯ್ಯದ್ ಮೋಸೀನ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಆಟ, ಪಾಠ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢಗೊಳ್ಳಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸೀನ್ತಿಳಿಸಿದರು.
ತಾಲೂಕಿನ ಎಂಜಿ ದಿಬ್ಬ ಗ್ರಾಮದ ಎಂ.ವಿ.ರುದ್ರಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 2024-25 ನೇ ಸಾಲಿನ ಕಸಬ ಹೋಬಳಿಯ ಪ್ರೌಢಶಾಲೆ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಇದನ್ನು ಬಳಕೆ ಮಾಡಿಕೊಳ್ಳಲು ಪೋಷಕರು ಸಹಕರಿಸಬೇಕು ಎಂದು ತಿಳಿಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಶಿಷ್ಟವಾದ ಕಲೆ ಇರುತ್ತದೆ. ಹಳ್ಳಿಗಾಡಿನಲ್ಲಿರುವ ಪ್ರತಿ ಮಗು ಕೂಡಾ ಹಾಡುಗಳನ್ನು ಹೇಳುವುದು, ಚಿತ್ರಕಲೆ, ನೃತ್ಯ, ರಂಗೋಲಿ ಹೀಗೆ ವಿವಿಧ ಕಲೆಗಳಲ್ಲಿ ಜಾಣರಿರುತ್ತಾರೆ. ಅಂಥಹ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಪ್ರತಿಭಾ ಕಾರಂಜಿ ವೇದಿಕೆ ಮಾಡುತ್ತವೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ ಮಾತನಾಡಿ, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಶಿಕ್ಷಣ ಸಂಯೋಜಕ ಶಶಿಧರ ಎಂ.ಪ್ರಾಸ್ತಾವಿಕವಾಗಿ ಮಾತನಾಡಿದರು. ಬೋಕಿಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಕರಿಯಮ್ಮ, ಅಭಿವೃದ್ಧಿ ಅಧಿಕಾರಿ ಜಯಣ್ಣ, ಹೊಸದುರ್ಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಪ್ರೌಢಶಾಲಾ ಮುಖ್ಯ ಶಿಕ್ಷಕ ಗೋದಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ದಯಾನಂದ, ಅಶ್ವತ್ಥ ಕುಮಾರ, ದೇವರಾಜ, ಶ್ರೀಧರ ಅಕ್ಷರವಾಣಿ ಸೇರಿದಂತೆ ಕಸಬ ಹೋಬಳಿಯ ಶಿಕ್ಷಕರು ಹಾಜರಿದ್ದರು.