ಅವಿಭಕ್ತ ಕುಟುಂಬ ಮಕ್ಕಳ ಪ್ರೀತಿ, ವಾತ್ಸಲ್ಯ, ಸಹಬಾಳ್ಳೆ, ಸಹಸ್ಪಂದನೆಯನ್ನು ಸ್ವಾಭಾವಿಕವಾಗಿ ಕಲಿಸುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮನೆ ಮಕ್ಕಳಿಗೆ ಅನಾಥಪ್ರಜ್ಞೆಯನ್ನು ಹುಟ್ಟಿಸುತ್ತಿದೆ.

ಗದಗ: ಮಕ್ಕಳ ಬಾಲ್ಯ ಸುಂದರಗೊಳಿಸುವ ಕಾರ್ಯ ಮನೆಯಿಂದಲೇ ಪ್ರಾರಂಭಗೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ತಿಳಿಸಿದರು.ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಎಂ.ಎಸ್. ಹುಲ್ಲೂರ ಹೈಟೆಕ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಜರುಗಿದ ಎರಡು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅವಿಭಕ್ತ ಕುಟುಂಬ ಮಕ್ಕಳ ಪ್ರೀತಿ, ವಾತ್ಸಲ್ಯ, ಸಹಬಾಳ್ಳೆ, ಸಹಸ್ಪಂದನೆಯನ್ನು ಸ್ವಾಭಾವಿಕವಾಗಿ ಕಲಿಸುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮನೆ ಮಕ್ಕಳಿಗೆ ಅನಾಥಪ್ರಜ್ಞೆಯನ್ನು ಹುಟ್ಟಿಸುತ್ತಿದೆ. ಅಂಕ ಗಳಿಕೆಗೆ ಮಕ್ಕಳನ್ನು ಸಜ್ಜುಗೊಳಿಸದೇ ಬಾಲ್ಯವನ್ನು ಆನಂದದಿಂದ ಕಳೆಯಲು ಒತ್ತಡಮುಕ್ತ ಪರಿಸರವನ್ನು ನಿರ್ಮಿಸುವುದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮೂಲತಃ ಸೃಜನಶೀಲರಾಗಿರುವ ಮಕ್ಕಳಿಗೆ ಅವಕಾಶ, ಸಂದರ್ಭಗಳಿಂದ ವಂಚಿತರಾಗಿದ್ದಾರೆ. ಮಾನವೀಯ ಗುಣಗಳು ನೆಲೆಗೊಳ್ಳಲು ವ್ಯಕ್ತಿಗೆ ಸಾಹಿತ್ಯ, ಕಲೆ, ಸಂಗೀತದೊಲನ ಮುಖ್ಯ. ಈ ಹಿನ್ನೆಲೆ ಸಮ್ಮೇಳನವನ್ನು ಪ್ರಾಯೋಗಿಕವಾಗಿ ಸಂಘಟಿಸುವ ಮೂಲಕ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದರು.ಮಾಜಿ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ ಹಮ್ಮಿಕೊಂಡ ಈ ಸಮ್ಮೇಳನ ಮಾದರಿಯಾದುದು. ಮಕ್ಕಳಿಗೆ ಬಾಲ್ಯದಲ್ಲಿಯೇ ವಿವಿಧ ವಿಷಯಗಳ ಬಗ್ಗೆ ಆಸಕ್ತಿ, ಅಭಿರುಚಿಯನ್ನು ಬೆಳೆಸಲು ಇಂತಹ ಸಮ್ಮೇಳನಗಳ ಅಗತ್ಯವಿದೆ ಎಂದರು.ಸಮ್ಮೇಳನಾಧ್ಯಕ್ಷ ತಯಬಅಲಿ ಹೊಂಬಳ ಮಾತನಾಡಿ, ಸರ್ಕಾರ ಮಕ್ಕಳ ಸಾಹಿತ್ಯದ ಕೃತಿಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಬೇಕು. ಹಿರಿಯ ಮಕ್ಕಳ ಸಾಹಿತಿಗಳನ್ನು ಜಿಲ್ಲಾ ಹಂತದಲ್ಲಿ ಗುರುತಿಸಿ ಗೌರವಿಸಬೇಕು ಎಂದರು.

ಈ ವೇಳೆ ತಯಬಅಲಿ ಹೊಂಬಳ ದಂಪತಿಗಳನ್ನು ಸನ್ಮಾನಿಸಲಾಯಿತು. ಸಮ್ಮೇಳನದ ವಿವಿಧ ವಿಭಾಗಗಳಲ್ಲಿ ಮಕ್ಕಳು ರಚಿಸಿದ ಕತೆ ಮತ್ತು ಕವಿತೆಗಳ ಕರಡು ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮಕ್ಕಳಾದ ಪ್ರವೀಣಕುಮಾರ ಸೊಬಗಿನ, ರಾಧಿಕಾ ತೊಂಡಿಹಾಳ, ತನುಶ್ರೀ ಬದಿ, ಪ್ರಣತಿ ಆರ್. ಗಡಾದ, ಬ.ಭೀ. ನಾಗನೂರ ಮೊದಲಾದವರನ್ನು ಸನ್ಮಾನಿಸಲಾಯಿತು.

ಎಂ.ಎಸ್. ಹುಲ್ಲೂರ, ಡಾ. ಶರಣಬಸವೇಶ ಆಲೂರ, ರತ್ನಕ್ಕ ಪಾಟೀಲ, ಸಂಜಯ ಬಾಗಮಾರ, ರಮಾಕಾಂತ ಕಮತಗಿ ಮೊದಲಾದವರು ಇದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಬಸವರಾಜ ನೆಲಜೇರಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.