ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಾಲಾ ಆವರಣವನ್ನು ತಂಬಾಕು ಮಾರಾಟ ಮುಕ್ತ ವಲಯವನ್ನಾಗಿಸುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಮನ್ವಯ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸುವ ಮೂಲಕ ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಲು ಕ್ರಮವಹಿಸಬೇಕು. ಜಿಲ್ಲೆಯ ಎಲ್ಲ ಗ್ರಾಮಗಳನ್ನೂ ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಬೇಕು ಎಂದರು.ಡಿದರು.
ಯುವ ಜನತೆಯು ಅತೀ ಹೆಚ್ಚಾಗಿ ತಂಬಾಕಿನ ದುಶ್ಚಟಗಳಿಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ. ಹಾಗಾಗಿ ತಂಬಾಕಿನ ದುಷ್ಪರಿಣಾಮಗಳ ಕುರಿತು ಆರೋಗ್ಯ ಇಲಾಖೆಯು ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಕಸ ವಿಲೇವಾರಿ ವಾಹನದಲ್ಲಿ ಆಡಿಯೋ ಜಿಂಗಲ್ಸ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ ಅವರು, ತಂಬಾಕು ಮುಕ್ತ ಗ್ರಾಮ ಘೋಷಣೆಗೆ ಸಹಕರಿಸಿದ ಆಯಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಮೇ.31 ರಂದು ಆಚರಿಸಲಾಗುವ ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದಲ್ಲಿ ಗೌರವಿಸಬೇಕು ಎಂದು ಸೂಚನೆ ನೀಡಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ ಪ್ರತಿ ತಾಲೂಕಿನಲ್ಲಿ ತಲಾ 20 ಕಾರ್ಯಾಚರಣೆಯ ಗುರಿ ನಿಗದಿಪಡಿಸಿದ್ದು, ಜಿಲ್ಲೆಯಲ್ಲಿ ಒಟ್ಟು 120 ಕಾರ್ಯಾಚರಣೆಯ ಗುರಿಗೆ ಕೇವಲ 32 ಕಾರ್ಯಾಚರಣೆ ಮಾತ್ರ ನಡೆಸಲಾಗಿದೆ. ಸಮರ್ಪಕವಾಗಿ ತಂಬಾಕು ಕಾರ್ಯಾಚರಣೆ ನಡೆಸದೇ, ಕಡಿಮೆ ಪ್ರಗತಿ ಸಾಧಿಸಿದ ತಾಲೂಕು ಮಟ್ಟದ ತಂಬಾಕು ನಿಯಂತ್ರಣ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ತಾಲೂಕು ಆರೋಗ್ಯಾಧಿಕಾರಿಗಳಿಗೆ ಶೋಕಾಸ್ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಾಕೀತು ಮಾಡಿದರು.ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ 64 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ. 46 ತಂಬಾಕು ಮುಕ್ತ ಶಾಲಾ,ಕಾಲೇಜುಗಳನ್ನು ಘೋಷಿಸಲಾಗಿದೆ. 32 ತಂಬಾಕು ದಾಳಿಗಳನ್ನು ನಡೆಸಲಾಗಿದೆ. ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 7 ತರಬೇತಿಗಳನ್ನು ನಡೆಸಲಾಗಿದೆ. 61 ಐಇಸಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ತಂಬಾಕು ವ್ಯಸನದಿಂದ ಮುಕ್ತರಾಗಲು ಇಚ್ಛಿಸುವವರಿಗಾಗಿ ಇರುವ ತಂಬಾಕು ವ್ಯಸನ ಮುಕ್ತ ಕೇಂದ್ರಗಳಲ್ಲಿ ಒಟ್ಟು 4715 ಜನರಿಗೆ ಸಮಾಲೋಚನೆ ನೀಡಲಾಗಿದೆ. ಈ ಪೈಕಿ 246 ಜನರು ಚಿಕಿತ್ಸೆ ಪಡೆದಿದ್ದು, 24 ಮಂದಿ ತಂಬಾಕು ತ್ಯಜಿಸಿದ್ದಾರೆ. 4 ತಂಬಾಕು ಮುಕ್ತ ಹಳ್ಳಿ ಹಾಗೂ 4 ತಂಬಾಕು ಮುಕ್ತ ದೇವಸ್ಥಾನಗಳನ್ನು ಘೋಷಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಎಂ.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಂಬಾಕು ನಿಯಂತ್ರಣಾಧಿಕಾರಿ ಡಾ.ರೇಖಾ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಸಿ.ಓ.ಸುಧಾ, ಡಾ.ಕಾಶಿ, ಡಾ.ಚಂದ್ರಶೇಖರ್ ಕಂಬಾಳಿಮಠ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಡಿ.ಎಂ.ಅಭಿನವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.