ದೇಶದ ಮೊಟ್ಟಮೊದಲ ಕವಯಿತ್ರಿ ವೈರಾಗ್ಯನಿಧಿ ಅಕ್ಕಮಹಾದೇವಿ ಇಡೀ ವಿಶ್ವ ಕಂಡಂತಹ ದಿಟ್ಟ ಮಹಿಳೆ ಅಕ್ಕಮಹಾದೇವಿಯ ಜೀವನ ಸಂದೇಶ ನಮಗೆಲ್ಲ ದಾರಿದೀಪ.
ನರಗುಂದ: ಸರ್ಕಾರ ಸಾಕಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಬಾಲ್ಯವಿವಾಹ ಪ್ರಕರಣಗಳು ಇಳಿಮುಖವಾಗುತ್ತಿಲ್ಲ. ಇದರ ಬಗ್ಗೆ ಸಮಾಜ ಜಾಗೃತವಾಗಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಯೋಜನಾಧಿಕಾರಿ ಮಾಲತಿ ದಿನೇಶ್ ತಿಳಿಸಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿಧೋದ್ದೇಶಗಳ ಸಂಘದ ಆಶ್ರಯದಲ್ಲಿ 381ನೇ ಮಾಸಿಕ ಶಿವಾನುಭವ ಹಾಗೂ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ಮಹಿಳಾಗೋಷ್ಠಿ ಸಮಾರಂಭದಲ್ಲಿ ಮಾತನಾಡಿದರು.ದೇಶದ ಮೊಟ್ಟಮೊದಲ ಕವಿಯಿತ್ರಿ ವೈರಾಗ್ಯನಿಧಿ ಅಕ್ಕಮಹಾದೇವಿ ಇಡೀ ವಿಶ್ವ ಕಂಡಂತಹ ದಿಟ್ಟ ಮಹಿಳೆ ಅಕ್ಕಮಹಾದೇವಿಯ ಜೀವನ ಸಂದೇಶ ನಮಗೆಲ್ಲ ದಾರಿದೀಪ. 12ನೇ ಶತಮಾನದಲ್ಲಿ ಮೌಢ್ಯಾಚರಣೆ ಹಾಗೂ ಅನಿಷ್ಟ ಪದ್ಧತಿ ಧಿಕ್ಕರಿಸಿ ಮಹಿಳೆಯರ ಪರ ಧ್ವನಿ ಎತ್ತಿ ಸ್ತ್ರೀ ಸ್ವಾತಂತ್ರ್ಯವನ್ನು ಬಯಸಿದ ಅಕ್ಕಮಹಾದೇವಿ ಸಾವಿರಾರು ವಚನಗಳನ್ನು ರಚಿಸಿದ್ದಾರೆ. ಅವು ಸರ್ವಕಾಲಿಕವಾಗಿವೆ ಎಂದರು.
ಉಮಾವತಿ ನಾಯ್ಕರ ಮಾತನಾಡಿ, ಆಧುನಿಕ ಯುಗದಲ್ಲಿ ಮಹಿಳೆಯರೂ ಪುರುಷರಷ್ಟೇ ಸಬಲರಾಗಿ ನಿಲ್ಲಬಲ್ಲವರಾಗಿದ್ದಾರೆ. ಅಕ್ಕಮಹಾದೇವಿಯ ವಚನಗಳನ್ನು ಪ್ರತಿಯೊಬ್ಬ ಮಹಿಳೆಯರೂ ಅರಿತು ಅಕ್ಕನ ಮಾರ್ಗದಲ್ಲಿ ಸ್ವಾವಲಂಬಿಯಾಗಿ ಜೀವನವನ್ನು ಸಾಗಿಸಬೇಕು ಎಂದರು.ಈ ಸಂದರ್ಭದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ರಡ್ಡೇರನಾಗನೂರಿನ ಬೃಂದಾವನ ಹಾಗೂ ಅಮೃತವರ್ಷಿಣಿ ಮಹಿಳಾ ಭಜನಾ ಮಂಡಳಿಯವರಿಂದ ಅಕ್ಕಮಹಾದೇವಿಯ ವಚನ ಸಂಗೀತ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ರಾಜೇಶ್ವರಿ ಶಂಕರಗೌಡ್ರ, ಎಸ್.ಎಫ್. ದ್ಯಾವನಗೌಡ್ರ, ಮಹಾದೇವಿ ಕುಪ್ಪಸ್ತ, ಡಾ. ವಿಜಯಲಕ್ಷ್ಮೀ ರಾಯನಗೌಡ್ರ, ಡಾ. ಸುಮಂಗಲಾ ಜಾಧವ, ಆರೋಗ್ಯ ಸುರಕ್ಷಾ ಅಧಿಕಾರಿ ಸುಮಿತ್ರಾ ಜಗಲಿ, ಪ್ರತಿಭಾ ಚಿನಿವಾಲರ ಪ್ರಮುಖರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ನರಸಾಪೂರ ಸ್ವಾಗತಿಸಿದರು. ಶರಣವ್ವ ತೆಗ್ಗಿನಮನಿ ವಂದಿಸಿದರು.