ಸ್ವಚ್ಛತೆ ಕುರಿತು ಅರಿವು ಮೂಡಿಸಿ: ಶಾಸಕ ತಮ್ಮಯ್ಯ

| Published : Jun 19 2024, 01:05 AM IST

ಸಾರಾಂಶ

ಡೆಂಘೀ ಜ್ವರದ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಆತಂಕ ತಲೆದೋರಿರುವ ಹಿನ್ನೆಲೆ ಶಾಸಕ ಎಚ್.ಡಿ.ತಮ್ಮಯ್ಯ ಮಂಗಳವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಡೆಂಘೀ ಜ್ವರದ ಪ್ರಕರಣ ಉಲ್ಬಣಗೊಳ್ಳುತ್ತಿರುವ ಆತಂಕ ತಲೆದೋರಿರುವ ಹಿನ್ನೆಲೆ ಶಾಸಕ ಎಚ್.ಡಿ.ತಮ್ಮಯ್ಯ ಮಂಗಳವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ವಾರ್ಡ್‌ಗಳಿಗೆ ತೆರಳಿ ಜ್ವರದಿಂದ ದಾಖಲಾಗಿರುವ ರೋಗಿಗಳ ಯೋಗಕ್ಷೇಮ ವಿಚಾರಿಸಿ, ಸೂಕ್ತ ಔಷದೋಪಚಾರ, ವೈದ್ಯಕಿಯ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ಜಿಲ್ಲಾ ಸರ್ಜನ್ ಡಾ.ಮೋಹನ್‌ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸೀಮ, ಡಾ. ಭರತ್, ಡಾ. ಚಂದ್ರಶೇಖರ್ ಮತ್ತಿತರರೊಂದಿಗೆ ಸಭೆ ನಡೆಸಿ ಡೆಂಘೀ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ, ಸ್ವಚ್ಛತೆ ಕಾಪಾಡುವ ಜೊತೆಗೆ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮನೆಗಳ ಸುತ್ತ ನೀರು ನಿಲ್ಲದಂತೆ ಹಾಗೂ ಅನುಪಯುಕ್ತ ವಸ್ತು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಕಳೆದ ಕೆಲವು ದಿನಗಳಿಂದ ಡೆಂಘೀ ಜ್ವರದ ಪ್ರಕರಣಗಳು ಇಳಿಮುಖಗೊಂಡಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಮುಂಜಾಗ್ರತೆ ವಹಿಸಲು ಅರಿವು ಮೂಡಿಸುತ್ತಿದ್ದಾರೆ. ನಗರಸಭೆ ವತಿಯಿಂದ ನಗರದ ವ್ಯಾಪ್ತಿಯಲ್ಲಿ ನಾಲ್ಕು ಯಂತ್ರ ಬಳಸಿ ಫಾಗಿಂಗ್ ಮಾಡಲಾಗುತ್ತಿದೆ. ಮತ್ತೆರಡು ಯಂತ್ರ ತರಿಸಿಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿ, ಮಾತ್ರೆಗಳು, ವೈದ್ಯರ ಲಭ್ಯತೆ ಇದೆ. ಹಾಸಿಗೆಗಳಿಗೆ ಒಂದಷ್ಟು ಬೇಡಿಕೆ ಹೆಚ್ಚಿದೆ. ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಸರ್ಜನ್‌ರಿಗೆ ತಿಳಿಸಿದ್ದೇವೆ. ಜ್ವರದ ಪ್ರಕರಣಗಳು ಹೆಚ್ಚಾಗಿ ವರದಿಯಾದಲ್ಲಿ ಬೇಲೂರು ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಹಳೇ ಕಟ್ಟಡವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಡೆಂಘೀ ಪ್ರಕರಣಗಳು ಉಲ್ಬಣಗೊಂಡಿದ್ದರೂ ಉಸ್ತುವಾರಿ ಸಚಿವರು, ಚುನಾಯಿತ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಚುನಾವಣೆ ನೀತಿಸಂಹಿತೆ ಇದ್ದಾಗಲೂ ನಾವು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಆದರೆ, ನೀತಿ ಸಂಹಿತೆ ಸಂದರ್ಭದಲ್ಲಿ ವೈದ್ಯರು, ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಲು ಅವಕಾಶ ಇರುವುದಿಲ್ಲ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಉತ್ತರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್‌ ಬಾಬು ಮಾತನಾಡಿ, ಈ ವರ್ಷ ಜನೇವರಿಯಿಂದ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 385 ಡೆಂಘೀ ಪ್ರಕರಣಗಳು ವರದಿಯಾಗಿತ್ತು. ಜೂನ್, ಜುಲೈನಲ್ಲೇ 170 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಇದೀಗ ಇಡೀ ಜಿಲ್ಲೆಯಲ್ಲಿ 25 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.

ಎಲ್ಲಾ ಜ್ವರದ ಪ್ರಕರಣಗಳು ಡೆಂಘೀ ಪ್ರಕರಣಗಳಾಗಿರುವುದಿಲ್ಲ. ಕಾರ್ಡ್ ಪರೀಕ್ಷೆ ನಂತರ ಎಲಿಸಾ ಪರೀಕ್ಷೆಯಲ್ಲೂ ದೃಢಪಟ್ಟರೆ ಮಾತ್ರ ಅದನ್ನು ಡೆಂಘೀ ಎಂದು ಪರಿಗಣಿಸಲಾಗುತ್ತದೆ. ಉಳಿದವು ಸಾಮಾನ್ಯ ಜ್ವರದ ಪ್ರಕರಣಗಳಾಗಿರುತ್ತವೆ. ಈ ಹಿನ್ನೆಲೆ ಯಾರೂ ಆತಂಕ ಪಡಬಾರದು ಎಂದು ಹೇಳಿದರು.

ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮಾತನಾಡಿ, ಜಿಲ್ಲಾಸ್ಪತ್ರೆಗೆ ಪ್ರತಿದಿನ ಜ್ವರದ ಪ್ರಕರಣಗಳು ಬರುತ್ತಿವೆ. ಇದರಲ್ಲಿ ಡೆಂಘೀಗಿಂತಲೂ ವಿಷಮ ಶೀತ ಜ್ವರದ ಪ್ರಕರಣಗಳು ಹೆಚ್ಚಿವೆ. ವಾರದ ಹಿಂದೆ ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ 10 ಮಂದಿಗೆ ಪ್ಲೇಟ್‌ಲೆಟ್ ಹಾಕಬೇಕಿತ್ತು. ಹಾಲಿ ದಿನಕ್ಕೆ ಹೆಚ್ಚೆಂದರೆ ಒಬ್ಬರಿಗೆ ಮಾತ್ರ ಪ್ಲೇಟ್‌ಲೆಟ್ ಅಗತ್ಯ ಬೀಳುತ್ತಿದೆ. ಈಗ ಒಟ್ಟು 10 ಡೆಂಗ್ಯು ಜ್ವರ ಇರುವವರ ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.