ಸಾರಾಂಶ
ಹಾವೇರಿ:ದುಶ್ಚಟಗಳಿಗೆ ದಾಸರಾಗದಂತೆ ಹಾಗೂ ದುಶ್ಚಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ಶ್ರೀ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಡಾ. ವಿ.ಎಚ್.ಕೆ. ಹಿರೇಮಠ ಹೇಳಿದರು.
ಶ್ರೀ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಜರುಗಿದ ವಿಶ್ವ ಹೆಪಟೈಟಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ೨೦೩೦ರ ವೇಳೆಗೆ ಹೆಪಟೈಟಸ್ ಕಾಯಿಲೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಗುರಿ ಹಾಕಿಕೊಂಡಿದೆ. ಅದಕ್ಕೆ ನಾವು-ನೀವೆಲ್ಲ ಕೈಜೋಡಿಸಿ ಕೆಲಸ ಮಾಡೋಣ ಎಂದು ಹೇಳಿದರು.ಉಪನ್ಯಾಸಕರಾಗಿ ಭಾಗವಹಿಸಿದ ಜಿಲ್ಲಾ ಆಸ್ಪತ್ರೆ ಡಾ. ವಿಶ್ವನಾಥ ಸಾಲಿಮಠ ಮಾತನಾಡಿ, ವಿದ್ಯಾರ್ಥಿಗಳು ಈ ಕಾಯಿಲೆ ಕುರಿತು ಆಳವಾಗಿ ತಿಳಿದುಕೊಳ್ಳಬೇಕು. ಈ ಕಾಯಿಲೆಯಿಂದಲೇ ಹಲವಾರು ಜನರು ಸಾವಿಗೀಡಾಗುತ್ತಿದ್ದಾರೆ. ವಿಶ್ವದಲ್ಲಿ ಈ ಕುರಿತು ಜಾಗೃತಿ ಮೂಡಿಸಿ ೨೦೩೦ರ ವೇಳೆಗೆ ಇದನ್ನು ವಿಶ್ವದಿಂದಲೇ ತೊಡೆದು ಹಾಕುವ ಪ್ರಯತ್ನದಲ್ಲಿ ನಾವು ನೀವೆಲ್ಲ ಕೆಲಸ ಮಾಡಬೇಕಾಗಿದೆ. ಹೆಪಟೈಟಸ್ ಕಾಯಿಲೆಯಿಂದ ಬಳಲುತ್ತಿದ್ದರೆ ಜಿಲ್ಲಾ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿಗಳು ಹಾಗೂ ಪ್ರಭಾರ ಹೆಪಟೈಟಸ್ ನಿಯಂತ್ರಣ ಅಧಿಕಾರಿ ಡಾ. ನೀಲೇಶ ಎಂ.ಎನ್. ಅವರು ಹೆಪಟೈಟಸ್ ಬಗ್ಗೆ ಮಾಹಿತಿ ನೀಡಿದರು.ಶ್ರೀ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ.ಎನ್. ಗೌಡರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಡಾ.ವಿ. ಜಯಲಕ್ಷ್ಮೀ ಎ.ಆರ್.ಟಿ., ನಿಂಗಪ್ಪ ಎಚ್. ಮುಬಾರಕ್, ಉಮಾಪತಿ ಬಿ.ಎಸ್. ಹಾಗೂ ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಗುಹೇಶ್ವರ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.
ಉಚಿತ ಪರೀಕ್ಷೆ:ಕಾರ್ಯಕ್ರಮದ ಆನಂತರ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಉಚಿತವಾಗಿ ಹೆಚ್ಚಿನ ಅಪಾಯದ ಗುಂಪಿನವರಾದ ಲೈಂಗಿಕ ಅಲ್ಪ ಸಂಖ್ಯಾತರು, ಮಾದಕದ್ರವ್ಯ ವ್ಯಸನಿಗಳಿಗೆ ಹೆಪಟೈಟಸ್- ಬಿ ಪರೀಕ್ಷೆ ಮಾಡಲಾಯಿತು.