ಸಾರಾಂಶ
ಅಂಕೋಲಾ: ಮತದಾರರು ವಿವಿಧ ಆಮಿಷ, ಆಸೆಗೆ ಬಲಿ ಬಿದ್ದು ಅಸಮರ್ಥರನ್ನೂ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದಾರೆ. ಹೀಗಾದಾಗ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಸಮರ್ಥ, ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಸಬಲಗೊಳ್ಳುತ್ತದೆ. ಈ ಬಗ್ಗೆ ಶಾಲಾ ಹಂತದಲ್ಲೇ ತಿಳಿವಳಿಕೆ ನೀಡಬೇಕು ಎಂದು ಕೆನರಾ ವೆಲ್ಫೇರ್ ಟ್ರಸ್ಟ್‌ನ ಆಡಳಿತಾಧಿಕಾರಿ ರವೀಂದ್ರ ಕೇಣಿ ತಿಳಿಸಿದರು.
ಪಿಎಂ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್, ಶಾಲಾ ಕೈದೋಟ ಹಾಗೂ ಗಾರ್ಡನ್ ಪುನರ್ ನಿರ್ಮಾಣ, ಔಷಧಿ ವನಗಳ ಪುನರ್ ನಿರ್ಮಾಣದ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ, ಸಮಾಜ ವಿಜ್ಞಾನ ಸಂಘದಿಂದ ಅತ್ಯಂತ ಅಚ್ಚುಕಟ್ಟಾಗಿ ಚುನಾವಣೆಯ ಎಲ್ಲ ಹಂತಗಳನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸಿ ಶಾಲಾ ಸಂಸತ್ ರಚಿಸಿರುವುದನ್ನು ಶ್ಲಾಘಿಸಿದರು.ಟ್ರಸ್ಟ್‌ನ ಧರ್ಮದರ್ಶಿ ವಿ.ಎನ್. ನಾಯಕ ಅವರು, ಶಾಲಾ ಕೈದೋಟ ಪುನರ್ ನಿರ್ಮಾಣ ಹಾಗೂ ಕಿಚನ್ ಗಾರ್ಡನ್ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಶಾಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಕೈಜೋಡಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಗಿಡ ನೆಡುವುದು ಹಾಗೂ ತರಕಾರಿ ಗಿಡ ಬೆಳೆಸುವುದರ ಮೂಲಕ ನಮ್ಮ ಶಾಲೆ ನಮ್ಮ ಕೈದೋಟ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಔಷಧಿ ವನಗಳ ಪುನರ್ ನಿರ್ಮಾಣಕ್ಕೆ ಔಷಧಿ ಸಸ್ಯ ನೆಡುವುದರ ಮೂಲಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ ಖಾರ್ವಿ ಚಾಲನೆ ನೀಡಿದರು. ಮುಖ್ಯಾಧ್ಯಾಪಕ ಚಂದ್ರಶೇಖರ ಕಡೇಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಫೀಸ್ ಭರಿಸುವ ಸಲುವಾಗಿ ₹೬೦ ಸಾವಿರ ನೀಡುವುದಾಗಿ ಘೋಷಿಸಿದ್ದಾರೆ ಎಂದರು.ಜಿ.ಎಸ್. ನಾಯ್ಕ ಸ್ವಾಗತಿಸಿದರು. ನಯನಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ ನಾಯಕ ಪ್ರಮಾಣವಚನ ಬೋಧಿಸಿದರು. ಅರ್ಚನಾ ಅಣ್ಣಪ್ಪ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಮುಗ್ದುಂ ಅಲ್ಗೋಡಿ ವಂದಿಸಿದರು.
ಜಿ.ಆರ್. ತಾಂಡೇಲ್ ಮತ್ತು ಗಣೇಶ ಎಸ್. ಭಟ್ ಕಾರ್ಯಕ್ರಮ ನಿರ್ವಹಿಸಿದರು. ರಾಘವೇಂದ್ರ ಮಹಾಲೆ, ರೇಷ್ಮಾ ಮಾನಕಾಮೆ, ಶ್ರುತಿ ನಾಯ್ಕ, ಚೇತನಾ ಗೌಡ, ನೇತ್ರಾವತಿ ನಾಯ್ಕ ಸದಸ್ಯರಾದ ಕೋಮಲಾ ಹಿರೇಮಠ, ಹೀನಾ ಶೇಖ್, ಪ್ರವೀಣ ಆಗೇರ, ಖೇಮು ನಾಯ್ಕ, ಶ್ವೇತಾ ಆರ್. ನಾಯ್ಕ ಉಪಸ್ಥಿತರಿದ್ದರು.