ಸಾರಾಂಶ
ಕೊಟ್ಟೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತ್ತು ಲೋಕಸಭೆ ಚುನಾವಣೆಯಲ್ಲಿ ಒಂದರಿಂದ ಒಂಬತ್ತನೇ ಸ್ಥಾನಕ್ಕೇರಲು ಪ್ರಮುಖ ಕಾರಣರಾಗಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವುದು ಖಚಿತ, ಆಗೇ ಆಗ್ತಾರೆ ಎಂದು ಕಾಂಗ್ರೆಸ್ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದ ಅವರು ನಂತರ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.ಕೆಪಿಸಿಸಿ ಅಧ್ಯಕ್ಷರಾದವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದು ಕಾಂಗ್ರೆಸ್‌ನಲ್ಲಿ ನಡೆದು ಬಂದ ಪದ್ಧತಿಯಾಗಿದೆ. ಆದರೆ ಈ ಬಾರಿ ಕೆಲವು ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿಯಾಗಿ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಸಮರ್ಥವಾಗಿ ಜಾರಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಆನಂತರ ಶಿವಕುಮಾರ್ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ವಿಧಾನಸಭೆಯಲ್ಲಿ ಅತಿಹೆಚ್ಚು ಸ್ಥಾನ ಗಳಿಸಿ ಅಧಿಕಾರ ಗದ್ದುಗೆ ಹಿಡಿಯಲು ಕಾರಣರಾಗಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ ಶ್ರಮದಿಂದ ಇದೀಗ ಸದೃಢವಾಗಿ ಬೆಳೆದ ಪಕ್ಷದ ರಾಜ್ಯಾಧ್ಯಕ್ಷರಾಗಲು ಸಿದ್ಧ ಎಂದು ಹೇಳುತ್ತಿರುವವರು, ಪಕ್ಷ ಕಷ್ಟದ ಕಾಲದಲ್ಲಿದ್ದಾಗ ಯಾರೂ ಮಾತನಾಡಲಿಲ್ಲ. ಆಗ ಡಿ.ಕೆ. ಶಿವಕುಮಾರ ಅದರ ಜವಾಬ್ದಾರಿ ಹೊತ್ತು ಪಕ್ಷ ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದರು.ಶ್ರೀ ಸ್ವಾಮಿ ದರ್ಶನ ಪಡೆದ ಶಾಸಕರು ತಮ್ಮ ಜನ್ಮದಿನದ ನಿಮಿತ್ತ ಇಲ್ಲಿನ ಕೊಟ್ಟೂರೇಶ್ವರ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿ ತುಲಾಭಾರ ಸೇವೆಗೈದು ತಮ್ಮಷ್ಟು ತೂಕದ ಬೆಲ್ಲದ ಮೂಟೆ ಅರ್ಪಿಸಿದರು.