ಸಮಾಜದ ಬೆಳವಣಿಗೆಗೆ ಎಂಜಿನಿಯರ್‌ ಕೊಡುಗೆ ಅಪಾರ

| Published : Jul 01 2024, 01:51 AM IST

ಸಾರಾಂಶ

ನಾಗರಿಕ ಸಮಾಜದ ಬೆಳವಣಿಗೆಗೆ ಪೂರಕವಾದ ರಸ್ತೆ, ಕಟ್ಟಡ, ಸೇತುವೆಗಳಂತಹ ಅಭಿವೃದ್ಧಿ ಕಾಮಗಾರಿಗಳ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುನಾಗರಿಕ ಸಮಾಜದ ಬೆಳವಣಿಗೆಗೆ ಪೂರಕವಾದ ರಸ್ತೆ, ಕಟ್ಟಡ, ಸೇತುವೆಗಳಂತಹ ಅಭಿವೃದ್ಧಿ ಕಾಮಗಾರಿಗಳ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.ನಗರದ ಪ್ರವಾಸ ಮಂದಿರದಲ್ಲಿ ತುಮಕೂರು ಗ್ರಾಮಾಂತರ ಲೋಕೋಪಯೋಗಿ ಇಲಾಖೆ ಉಪವಿಭಾಗೀಯ ಕಚೇರಿಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಹಾಯಕ ಇಂಜಿನಿಯರ್‌ಗಳಾದ ಪಿ.ಡಿ. ಕೃಷ್ಣಮೂರ್ತಿ ಹಾಗೂ ಡಿ.ನರಸಿಂಹಮೂರ್ತಿ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.ರಸ್ತೆ, ಸೇತುವೆಗಳ ನಿರ್ಮಾಣದಿಂದ ಸಂಪರ್ಕಗಳು ಉತ್ತಮಗೊಳ್ಳುತ್ತವೆ. ಮಕ್ಕಳನ್ನು ಉತ್ತಮ ಶಾಲೆಗೆ ಕಳುಹಿಸಲು, ಉದ್ಯೋಗಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಹೋಗಿ ಬರಲು, ವ್ಯಾಪಾರ ವಹಿವಾಟು ಹೆಚ್ಚಳು, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಂಪರ್ಕ ಕೊಂಡಿಯಂತಿರುವ ಸೇತುವೆ-ರಸ್ತೆಗಳನ್ನು ನಿರ್ಮಾಣ ಮಾಡುವ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಶ್ರಮ, ಕಾರ್ಯಕ್ಷಮತೆ ಅನನ್ಯವಾದುದು ಎಂದು ತಿಳಿಸಿದರು.ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದವರು ತಮಗೆ ಎಲ್ಲವೂ ತಿಳಿದಿದೆ ಎಂಬ ಭಾವನೆ ಹೊಂದಿರುತ್ತಾರೆ. ಯುವ ನೌಕರರು ತಮ್ಮ ಸೇವಾವಧಿಯಲ್ಲಿ ಹಿರಿಯ ಅಧಿಕಾರಿ, ಸಿಬ್ಬಂದಿಗಳ ಮಾರ್ಗದರ್ಶನ ಪಡೆಯಬೇಕು. ಇಂದಿನ ಕಾಲದಲ್ಲಿ ವೃತ್ತಿ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆಯಿಂದ ನಿವೃತ್ತಿ ಹೊಂದುವುದು ಕಡಿಮೆ ಸಾಧನೆಯಲ್ಲ. ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿಗಳ ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ಅಧಿಕಾರಿ ನೌಕರರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾಮಾಣಿಕವಾದ ಸೇವೆ ಒದಗಿಸಿ, ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳಿಗೆ ಸಲಹೆ ನೀಡಿದರು.ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರು ಮಾತನಾಡಿ, ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿರುವ ಪಿ.ಡಿ. ಕೃಷ್ಣಮೂರ್ತಿ ಹಾಗೂ ಡಿ. ನರಸಿಂಹಮೂರ್ತಿ ಅವರ ಸೇವೆ ಹಾಗೂ ಕಾರ್ಯನಿರ್ವಹಣೆ ಬಗ್ಗೆ ಸ್ಮರಿಸಿ ಶುಭ ಹಾರೈಸಿದರು.ಸೇವೆಯಿಂದ ನಿವೃತ್ತಿ ಹೊಂದಿದ ಕೃಷ್ಣಮೂರ್ತಿ ಹಾಗೂ ನರಸಿಂಹಮೂರ್ತಿ ಅವರು ತಮ್ಮ ವೃತ್ತಿ ಜೀವನದ ನೆನಪುಗಳನ್ನು ಹಂಚಿಕೊಂಡರು. ಸೇವೆಯಿಂದ ನಿವೃತ್ತರಾದ ಸಹಾಯಕ ಇಂಜಿನಿಯರ್‌ಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.