ಗ್ಯಾರಂಟಿ ಯೋಜನೆಗಳೇ ರಾಜ್ಯ ಸರ್ಕಾರಕ್ಕೆ ಮುಳುವು: ಸುನಿಲ್‌ ಕುಮಾರ್‌

| Published : Jul 01 2024, 01:51 AM IST

ಗ್ಯಾರಂಟಿ ಯೋಜನೆಗಳೇ ರಾಜ್ಯ ಸರ್ಕಾರಕ್ಕೆ ಮುಳುವು: ಸುನಿಲ್‌ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳದ ಬಸ್ ನಿಲ್ದಾಣದಲ್ಲಿ ಹಾಲಿನ ದರ ಏರಿಕೆ ವಿರೋಧಿಸಿ ಹಾಲು ಹಾಕದೇ ಚಹಾ ಮಾಡಿ ಪ್ರತಿಭಟನೆ ಮಾಡಲಾಯಿತು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಭಾಗವಹಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳಗ್ಯಾರಂಟಿ ಯೋಜನೆಗಲೇ ರಾಜ್ಯ ಸರ್ಕಾರಕ್ಕೆ ಮುಳುವಾಗಲಿದೆ. ಗ್ಯಾರಂಟಿ ಯೋಜನೆಗಳ ಈಡೇರಿಕೆಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಗೊಳಿಸಿರುವುದು ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

ಅವರು ಶನಿವಾರ ನಗರದ ಬಸ್ ನಿಲ್ದಾಣದಲ್ಲಿ ನಡೆದ ಹಾಲಿನ ದರ ಏರಿಕೆ ವಿರೋಧಿಸಿ ಹಾಲು ಹಾಕದೇ ಚಹಾ ಮಾಡಿ ನಡೆಸಿದ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ನಾಯಕರು ಹೋದ ಕಡೆಗಳಲ್ಲಿ ಗ್ಯಾರಂಟಿಗಳಿಂದ ಬಡವರ ಬದುಕು ಉದ್ಧಾರವಾಗಿದೆ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಡಿಸೇಲ್ ಹಾಗೂ ಪೆಟ್ರೋಲ್ ದರ ಹೆಚ್ಚಿಸಿದ ಪರಿಣಾಮ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ಹಾಲಿನ ದರ ಹೆಚ್ಚಳ ಮಾಡಿದ ಕಾಂಗ್ರೆಸ್‌ ಬಡವರ ಬದುಕಿಗೆ ಬರೆ ಹಾಕಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಬಡವರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕಾಗಿ ರೈತರಿಗೆ ಪ್ರತೀ ಲೀಟ‌ರ್ ಹಾಲಿಗೆ ತಲಾ 5 ರೂ ಸಬ್ಸಿಡಿ ಕೊಡುತ್ತಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಳೆದ ಒಂದು ವರ್ಷದಿಂದ ರೈತರಿಗೆ ನಯಾಪೈಸೆ ಬಾಕಿ ಸಬ್ಸಿಡಿ ಹಣ ಪಾವತಿಯಾಗಿಲ್ಲ. ಈಗಾಗಲೇ 1,100 ಕೋಟಿ ರು. ಪಾವತಿಗೆ ಬಾಕಿ ಇರಿಸಿಕೊಂಡಿದ್ದು ತಕ್ಷಣವೇ ಹಣ ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಲೆ ಏರಿಕೆ ವಿರುದ್ಧ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದ ರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಜು.3ರಂದು ರಾಜ್ಯ ಬಿಜೆಪಿ ವತಿಯಿಂದ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ಸುನಿಲ್‌ ಕುಮಾ‌ರ್ ತಿಳಿಸಿದರು.

ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ವಕ್ತಾರ ರವೀಂದ್ರ ಮೊಯ್ಲಿ, ನಿತ್ಯಾನಂದ ಪೈ, ಗಿರಿಧರ್ ನಾಯಕ್, ಅವಿನಾಶ್‌ ಶೆಟ್ಟಿ, ರಾಕೇಶ್ ಶೆಟ್ಟಿ, ಪುರಸಭಾ ಸದಸ್ಯರಾದ ಭಾರತಿ ಅಮೀನ್‌, ಶೋಭಾ ಆರ್. ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.------------ಕಾಂಗ್ರೆಸ್‌ ಟೀಕೆ: ಹಾಲಿನ ಬೆಲೆ ಏರಿಕೆಯನ್ನು ನೆಪವಾಗಿಸಿಕೊಂಡು ಶಾಸಕ ಸುನೀಲ್ ಕುಮಾರ್ ಕಾರ್ಕಳದಲ್ಲಿ ಹಾಲಿಲ್ಲದ ಚಾಹ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ. ಶಾಸಕರಿಗೆ ಈ ರೀತಿ ಪ್ರತಿಭಟನೆ ಸಾಮಾನ್ಯವಾಗಬಹುದು. ಯಾಕೆಂದರೆ ಕಂಚೇ ಇಲ್ಲದೆ ಕಂಚಿನ ಪ್ರತಿಮೆ ಮಾಡಿದ ಮಹಾನುಭಾವರಿಗೆ ಹಾಲಿಲ್ಲದ ಚಹಾ ಮಾಡುವುದು ಡೊಡ್ಡ ವಿಷಯವಾಗಲಿಕ್ಕಿಲ್ಲ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿ ರೈತರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ, ಉತ್ಪಾದನೆಯಾದ ಹೆಚ್ಚುವರಿ ಹಾಲನ್ನು ಪ್ಯಾಕೆಟಿಗೆ 50 ಮಿ.ಲೀ. ಸೇರಿಸಿ ಮಾರಾಟ ಮಾಡಲಾಗುತ್ತದೆ. ಆ ಹೆಚ್ಚುವರಿ ಹಾಲಿಗೆ ಎರಡು ರು. ಹೆಚ್ಚುವರಿಯಾಗಿ ಪಡೆಯಲಾಗುತ್ತದೆಯೇ ವಿನಃ ಬೆಲೆ ಏರಿಸಿಲ್ಲ. ಇದರಿಂದ ಹಾಲು ಉತ್ಪಾದಕರಿಗೆ ಲಾಭದಾಯಕವಾಗಿದೆ ವಿನಃ ಯಾರಿಗೂ ಹೊರೆಯಾಗಿಲ್ಲ. ಇದನ್ನು ರಾಜ್ಯದ ಮುಖ್ಯಮಂತ್ರಿಯೇ ಸ್ಪಷ್ಟಪಡಿಸಿದ್ದಾರೆ ಆದರೂ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಅರ್ಥಹೀನ ಎಂದು ಹೇಳಿದರು.