ಸಾರಾಂಶ
ರಾಯಬಾಗ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ತಹಸೀಲ್ದಾರ್ ಸುರೇಶ ಮುಂಜೆ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ರಾಯಬಾಗ
ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಡೆಂಘೀ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ತಹಸೀಲ್ದಾರ್ ಸುರೇಶ ಮುಂಜೆ ಸೂಚಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಪಂ, ತಾಪಂ, ಶಿಕ್ಷಣ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ಎಲ್ಲರೂ ಜೊತೆಗೂಡಿ ಡೆಂಘೀ ಹರಡದಂತೆ ಮುಂಜಾಗ್ರತವಾಗಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಂ. ಪಾಟೀಲ ಮಾತನಾಡಿ, ಆರೋಗ್ಯ ವೈದ್ಯಾಧಿಕಾರಿಗಳು ಅವರವರ ವ್ಯಾಪ್ತಿಯಲ್ಲಿ ಅಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಂದ ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆ ಕಾರ್ಯಕೈಗೊಳ್ಳಬೇಕು ಹಾಗೂ ವೈಯಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಬಗ್ಗೆ ಅರಿವು ಮೂಡಿಸಬೇಕು. ಶಂಕಿತ ಡೆಂಘೀ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು.ತಾಪಂ ಇಒ ಅರುಣ ಮಾಚಕನ್ನವರ, ಬಿಇಒ ಬಸವರಾಜಪ್ಪ, ಸಿಡಿಪಿಒ ಸಂತೋಷ ಕಾಂಬಳೆ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ, ರಾಯಬಾಗ ಪಪಂ ಮುಖ್ಯಾಧಿಕಾರಿ ಎಸ್.ಆರ್. ಮಾಂಗ, ಡಾ.ಸತೀಶ ಕಲ್ಲಟ್ಟಿ ಹಾಗೂ ಪುರಸಭೆ, ಪಪಂ ಮುಖ್ಯಾಧಿಕಾರಿ ಮತ್ತು ತಾಲೂಕಿನ ಗ್ರಾಮ ಪಂಚಾಯತಿ ಅಧಿಕಾರಿಗಳು ಇದ್ದರು.