ಸಾರಾಂಶ
ಬರಗಾಲದಲ್ಲಿ ಜಾನುವಾರು ನಿರ್ವಹಣೆ ಬಗ್ಗೆ ಜಿಲ್ಲಾ ಮಟ್ಟದ ಜಾನುವಾರು ಜಾಗೃತಿ ಶಿಬಿರಕನ್ನಡಪ್ರಭವಾರ್ತೆ ಹಾಸನ
ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಜಾನುವಾರಿಗೆ ಸಾಕಷ್ಟು ಮೇವಿನ ಲಭ್ಯತೆ ಇದೆ, ಬರಗಾಲದ ಸನ್ನಿವೇಶವನ್ನು ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಮೇವಿನ ಉತ್ಪಾದನೆ ಹಾಗೂ ಸಮರ್ಪಕ ನಿರ್ವಹಣೆಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖಾ ವತಿಯಿಂದ ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಸ್ತರಣಾ ಕಾರ್ಯಕ್ರಮದಡಿ ನಗರದ ಹೊರವಲಯದ ಪಶುವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬರಗಾಲದಲ್ಲಿ ಜಾನುವಾರು ನಿರ್ವಹಣೆ ಬಗ್ಗೆ ಜಿಲ್ಲಾ ಮಟ್ಟದ ಜಾನುವಾರು ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜಾನುವಾರಿಗೆ ಮೇವು ಹಾಗೂ ನೀರು ಪೂರೈಕೆಯು ಸೇರಿದಂತೆ ಅವುಗಳ ಆರೋಗ್ಯದ ಬಗ್ಗೆಯೂ ಕ್ರಮಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಮ್.ಸಿ.ಶಿವಕುಮಾರ್ ಮಾತನಾಡಿ, ಮಹಾವಿದ್ಯಾಲಯದಲ್ಲಿ ಪಶುಪಾಲಕರಿಗೆ ನೆರವಾಗುವ ಹಲವಾರು ರೈತಮುಖಿ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಪಶುಪಾಲನೆಗೆ ಸಂಬಂಧಿಸಿದ ತಾಂತ್ರಿಕತೆಗಳನ್ನು ರೈತಾಪಿ ವರ್ಗದವರಿಗೆ ತಲುಪಿಸುವಲ್ಲಿ ಮುಖ್ಯ ಪಾತ್ರ ವಹಿಸಲಾಗಿದೆ ಎಂದು ತಿಳಿಸಿದರು.ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಕೆ.ಆರ್.ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದದಲ್ಲಿ ತಿಳಿಸಿರುವಂತೆ ಜಾನುವಾರು ಸೇರಿದಂತೆ ಎಲ್ಲಾ ಜೀವಿಗಳ ಮೇಲೂ ಸಹಾನುಭೂತಿ ಹೊಂದಿದ್ದು, ಅವುಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸುವುದು ದೇಶದ ಎಲ್ಲಾ ನಾಗರಿಕರ ಕರ್ತವ್ಯವಾಗಿರುತ್ತದೆ. ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಒಂದು ಲಕ್ಷಕ್ಕೂ ಹೆಚ್ಚು ಮೇವಿನ ಬೀಜದ ಕಿರು ಪೊಟ್ಟಣಗಳನ್ನು ಜಿಲ್ಲೆಯ ಅರ್ಹ ರೈತರಿಗೆ ವಿತರಿಸಲಾಗಿದ್ದು ಬರಗಾಲದಲ್ಲಿ ಮೇವಿನ ಕೊರತೆ ನೀಗಿಸುವ ಸಂಬಂದ ಮೇವು ಉತ್ಪಾದನೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಜೈಶಂಕರ್ ಎನ್., ಡಾ.ವಿನೂತನ್ ಎಮ್.ಕೆ. ಹಾಗೂ ಡಾ. ಎಸ್. ಸುಂದರೇಶ್ ಜಾನುವಾರು ಜಾಗೃತಿ ಶಿಬಿರದಲ್ಲಿ ಬರಗಾಲದಲ್ಲಿ ಜಾನುವಾರು ನಿರ್ವಹಣೆ ಹಾಗೂ ಮೇವು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ. ಚೇತನ್ ಕೆ.ಪಿ. ಹಾಗೂ ಡಾ. ರೂಪಾ ಟಿ.ಕೆ ಶಿಬಿರದಲ್ಲಿ ರಸಮೇವು ತಯಾರಿಕೆ, ಒಣಮೇವಿನ ಪೌಷ್ಠೀಕರಣ, ಜಲಕೃಷಿಯಲ್ಲಿ ಮೇವು, ಮೆಕ್ಕೆಜೋಳದ ದಿಂಡನ್ನು ಪುಡಿ ಮಾಡಿ ಪಶು ಆಹಾರವಾಗಿ ಬಳಸುವುದು ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಹಾಗೂ ವಿವಿಧ ಮೇವಿನ ಬೆಳೆಗಳ ಪ್ರದರ್ಶನಗಳ ಬಗ್ಗೆ ಮಾಹಿತಿ ನೀಡಿದರು.
ಜಾಗೃತಿ ಶಿಬಿರದಲ್ಲಿ ೩೨೦ಕ್ಕೂ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರು, ಹಾಸನ ಹಾಲು ಒಕ್ಕೂಟದ ಹಾಗೂ ಪಶುಪಾಲನಾ ಇಲಾಖೆಯ ಪಶುವೈದ್ಯರು, ವಿಸ್ತರಣಾಧಿಕಾರಿಗಳು ಮತ್ತು ಪಶು ಸಖಿಯರು ಪಾಲ್ಗೊಂಡಿದ್ದರು.ಪಶುವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬರಗಾಲದಲ್ಲಿ ಜಾನುವಾರು ನಿರ್ವಹಣೆ ಬಗ್ಗೆ ಜಿಲ್ಲಾ ಮಟ್ಟದ ಜಾನುವಾರು ಜಾಗೃತಿ ಶಿಬಿರದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿದರು.