ಸಾರಾಂಶ
ಬಳ್ಳಾರಿ: ಬಾಲ್ಯ ವಿವಾಹ ತಡೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ನಿಷೇಧ ಹಾಗೂ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಮುದಾಯಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಾಗ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದು ಬಾಲ್ಯ ವಿವಾಹ ತಡೆಗಟ್ಟಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಈ ಕುರಿತು ಅಧಿಕಾರಿಗಳು ಸಮನ್ವತೆ ಸಾಧಿಸಬೇಕು ಎಂದು ಹೇಳಿದರು.
ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕು. “ತೆರೆದ ಮನೆ” ಕಾರ್ಯಕ್ರಮದಡಿ ಪೊಲೀಸ್ ಠಾಣೆ, ನ್ಯಾಯಾಲಯ ಸೇರಿದಂತೆ ವಿವಿಧ ಇಲಾಖೆಗಳಿಗೆ ವಾರಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕರೆದೊಯ್ದು, ಕಾನೂನು ಸುವ್ಯವಸ್ಥೆ ಪ್ರಾತಕ್ಷಿಕೆ ತೋರಿಸಿ ಅಧಿಕಾರಿಗಳೊಂದಿಗೆ ನಿರ್ಭೀತಿಯಿಂದ ಸ್ನೇಹ ಬೆಸೆದುಕೊಳ್ಳಲು ಅನುವು ಮಾಡಿ ಎಂದು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದರು.ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಮಟ್ಟದಲ್ಲಿ ಎರಡು ಅಥವಾ ಮೂರು ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಮಕ್ಕಳ ಸಹಾಯವಾಣಿ, ಪೊಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮತ್ತಿತರ ವಿಷಯಗಳ ಬಗ್ಗೆ ತಿಳಿಸಬೇಕು ಎಂದರು.
ಕಾಯ್ದೆಗಳ ಬಗ್ಗೆ ಮಕ್ಕಳಿಗೆ ಸಾಮಾನ್ಯವಾಗಿ ತಿಳಿಸಿಕೊಟ್ಟರೆ ಅವರಿಗೆ ತಮ್ಮ ಮೇಲಾಗುವ ಅನ್ಯಾಯಗಳ ಬಗ್ಗೆ ತಿಳಿವಳಿಕೆ ಬರುತ್ತದೆ. ಪೊಲೀಸ್ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಲು ಧೈರ್ಯ ಮೂಡುತ್ತದೆ ಎಂದರು.ಶಾಲೆಯಲ್ಲಿ ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಹೇಗೆ ತಡೆಗಟ್ಟಬಹುದು. ಬ್ಯಾಡ್ ಟಚ್ ಅಂದರೇನು? ಗುಡ್ ಟಚ್ ಅಂದರೇನು? ಯಾರಾದಾರೂ ಬ್ಯಾಡ್ ಟಚ್ ಮಾಡಿದರೆ ಅದನ್ನು ಹೇಗೆ ಗುರುತಿಸಬೇಕು. ಅವುಗಳನ್ನು ತಡೆಗಟ್ಟಲು ಮಕ್ಕಳು ಏನು ಮಾಡಬೇಕು ಎಂಬುದರ ಮಾಹಿತಿ ಮಕ್ಕಳಿಗೆ ನೀಡಬೇಕು. ಕಾಯ್ದೆ ಬಗ್ಗೆ ಪರಿಪೂರ್ಣವಾಗಿ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಪ್ರತಿ ಶಾಲೆಗಳಿಗೆ ವೇಳಾಪಟ್ಟಿಯಂತೆ ಪೊಲೀಸ್ ಸಿಬ್ಬಂದಿಗಳು ಬೀಟ್ ನಡೆಸಬೇಕು. ಇದರಿಂದ ಶಾಲೆಗಳ ಆವರಣದಲ್ಲಿ ಮದ್ಯಪಾನ, ಇತರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.55 ಬಾಲ್ಯವಿವಾಹಕ್ಕೆ ತಡೆ:
ಜಿಲ್ಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಏಪ್ರಿಲ್ 2024ರಿಂದ ಜೂನ್ 2024ರ ಅಂತ್ಯಕ್ಕೆ13 ಪ್ರಕರಣ ದಾಖಲಾಗಿದ್ದು, 13 ಪ್ರಕರಣ ವಿಚಾರಣೆ ಮತ್ತು ಟ್ರಯಲ್ ಹಂತದಲ್ಲಿವೆ. ಅದೇರೀತಿಗಿ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 55 ಬಾಲ್ಯವಿವಾಹ ಪ್ರಕರಣ ಪೈಕಿ 53 ಬಾಲ್ಯವಿವಾಹವನ್ನು ತಡೆಯಲಾಗಿದ್ದು, 2 ಬಾಲ್ಯವಿವಾಹ ನಡೆದಿವೆ. ಈ ಎರಡು ಪ್ರಕರಣಗಳಿಗೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿಉರ್ದೇಶಕ ವಿಜಯ್‌ಕುಮಾರ್ ಸಭೆಗೆ ತಿಳಿಸಿದರು.ಬಾಲ್ಯವಿವಾಹವೆಂದು ಗುರುತಿಸಲು ಸಂತ್ರಸ್ತೆಯ ಆಧಾರ್ ಕಾರ್ಡ್‌ನಲ್ಲಿನ ಜನ್ಮ ದಿನಾಂಕ ಪರಿಗಣಿಸದೇ ಶಾಲಾ ದಾಖಲೆ, ಜನನ ಪ್ರಮಾಣಪತ್ರವನ್ನು ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಕೆ. ಜಲಾಲಪ್ಪ ಮತ್ತಿತರರು ಭಾಗವಹಿಸಿದ್ದರು.