ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿ:ಭಾರತೀಯ ಶಾಸ್ತ್ರೀಯ ಸಂಗೀತವನ್ನು ಗುರುಕುಲ ಮಾದರಿಯಲ್ಲಿ ಕಲಿಯಬೇಕೆಂದು ಇಲ್ಲಿಗೆ ಬಂದಿದ್ದೆ. ಆದರೆ ಇಲ್ಲಿಯ ಗುರುಕುಲವನ್ನು ಸರ್ಕಾರ ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಸೇರಿಸಿದ್ದರಿಂದ ಕನಸು ನುಚ್ಚುನೂರಾಗುವ ಆತಂಕ ಉಂಟಾಗಿದೆ ಎಂದು ಗುರುಕುಲ ವಿದ್ಯಾರ್ಥಿ, ಮಹಾರಾಷ್ಟ್ರ ಸಚಿನ್ ಜಾಧವ ಕಳವಳ ವ್ಯಕ್ತಪಡಿಸಿದರು.
ಗುರುಕುಲದಲ್ಲಿ ಎರಡು ತಿಂಗಳಿಂದ ಸಂಗೀತ ತರಗತಿಗಳು ಆರಂಭವಾಗದೇ ಅನಿಶ್ಚಿತತೆ ಹಿನ್ನೆಲೆಯಲ್ಲಿ ಅವರು ''''ಕನ್ನಡಪ್ರಭ'''' ಜತೆ ಮಾತನಾಡಿದರು.ಮಧ್ಯಪ್ರದೇಶದ ಫಾಯಲ್ ಮಲ್ಲಿಕ್, ಅನಂತ ಗೌತಮ, ಸತ್ಯಂ ಶರ್ಮಾ, ಮೋಹಿನಿ ಭಟ್, ಉತ್ತರ ಪ್ರದೇಶದ ಚಂದ್ರಕಾಂತ ಭಾರತಿ, ಮಹಾರಾಷ್ಟ್ರದ ವೈಷ್ಣವಿ ಕೇರಾಳೆ, ವೈಷ್ಣವಿ ಬರ್ಕತೆ.. ಹೀಗೆ ಹಲವಾರು ವಿದ್ಯಾರ್ಥಿಗಳು ಗುರುಕುಲದಲ್ಲಿ ಎರಡು ವರ್ಷದಿಂದ ಸಂಗೀತ ಅಭ್ಯಾಸ ಮಾಡುತ್ತಿದ್ದು, ಗುರುಕುಲ ಬಂದ್ ಆಗಿರುವುದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ನಾವು ಅಷ್ಟು ದೂರದಿಂದ ಗುರುಕುಲ ಪದ್ಧತಿಯಲ್ಲಿ ಸಂಗೀತ ಅಭ್ಯಾಸಕ್ಕೆ ಜುಲೈನಲ್ಲೇ ಬಂದು ಹೊರಗಡೆ ರೂಂ ಮಾಡಿಕೊಂಡಿದ್ದೇವೆ. ಕರ್ನಾಟಕದ ಬೇರೆ ವಿದ್ಯಾರ್ಥಿಗಳು ಗುರುಕುಲಕ್ಕೆ ಬಂದ ಮೇಲೆ ನಮ್ಮನ್ನು ಕರೆದುಕೊಂಡು ಬಂದಿದ್ದಾರೆ. ನಮ್ಮ ಈ ಸ್ಥಿತಿ ಯಾರಿಗೂ ಬರಬಾರದು, ಊರಿನಿಂದ ಪಾಲಕರು ಸಹ ಯಾಕೆ ಹೋಗಿದ್ದೀರಿ, ಬಂದು ಬಿಡಿ ಎಂದು ಕರೆಯುತ್ತಿದ್ದಾರೆ. ಆದರೆ ನಮಗೆ ಹೋಗಲು ಇಷ್ಟವಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.ಗುರುಕುಲದಲ್ಲಿ ರಾಜ್ಯದ ಕಲಬುರಗಿಯ ಪ್ರತೀಕ, ಶಿವಸ್ವಾಮಿ, ಬಾಗಲಕೋಟೆಯ ಮಹೇಶ ಹುಂಡೇಕರ್, ಗೋಕಾಕದ ಓಂಕಾರ, ಅಥಣಿಯ ಶ್ರೀಕೃಷ್ಣ, ಬಳ್ಳಾರಿಯ ಜ್ಞಾನೇಶ ಮಡಿವಾಳರ, ನವಲಗುಂದದ ಪ್ರಸನ್ ಹಿರೇಮಠ, ಹುಬ್ಬಳ್ಳಿಯ ಪರಶುರಾಮ ಸಹ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುತ್ತಿದ್ದಾರೆ.
ಮೇ ತಿಂಗಳು ರಜೆ ಇತ್ತು. ಜೂನ್‌ನಲ್ಲಿ ರಜೆ ಮತ್ತೆ ವಿಸ್ತರಿಸಿದರು. ಜುಲೈನಲ್ಲೂ ಅದೇ ಸ್ಥಿತಿ ಮುಂದುವರಿದು ಜು. 15ರಿಂದ ಎಲ್ಲ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕು ನೀವು ಬನ್ನಿ ಎಂದು ಗುರುಕುಲ ಆಡಳಿತ ನೋಡಿಕೊಳ್ಳುತ್ತಿದ್ದ ಅಧಿಕಾರಿಗಳು ಫೋನ್ ಮಾಡಿದ್ದಾರೆ. ಬಂದ ಮೇಲೆ ಗುರುಕುಲ ಮೈಸೂರು ಸಂಗೀತ ವಿವಿಗೆ ಸೇರ್ಪಡೆಯಾಗಿದ್ದು, ಇನ್ನು ಮುಂದೆ ಗುರುಕುಲ ಶಿಕ್ಷಣ ಪದ್ಧತಿ ಇರುವುದಿಲ್ಲ ಎಂದು ಹೇಳಿದಾಗ ವಿದ್ಯಾರ್ಥಿಗಳಿಗೆ ಶಾಕ್ ಆಗಿದೆ.ಹೊಗೆ ಹಾಕುತ್ತಿದ್ದಾರೆ:
''''ಹೋಗು ಎನ್ನದೇ ಹೊಗೆ ಹಾಕಿದರು'''' ಎನ್ನುವಂತೆ ಮೂಲಭೂತ ಸೌಕರ್ಯಗಳು ಇಲ್ಲಿ ಯಾವುದೂ ಇಲ್ಲ. ತ್ರಿಫೇಸ್ ವಿದ್ಯುತ್ ಇತ್ತು. ಎರಡು ಫೇಸ್‌ಗಳು ಶಾರ್ಟ್ ಸರ್ಕೀಟ್‌ನಿಂದ ಹಾಳಾಗಿದ್ದು, ಒಂದು ಫೇಸ್ ಮಾತ್ರ ಉಳಿದಿದೆ. ಅದು ಯಾವಾಗ ಹೋಗುತ್ತದೆ ಗೊತ್ತಿಲ್ಲ. ಮೋಟಾರ್ ಕೆಟ್ಟಿರುವುದರಿಂದ ನೀರು ಸಹ ಪೂರೈಕೆಯಾಗುತ್ತಿಲ್ಲ. ಹೊರಗಿನಿಂದ ಕೊಡಗಳಲ್ಲಿ ನೀರು ತಂದು ಜಳಕ ಮಾಡುತ್ತಿದ್ದೇವೆ. ಗುರುಕುಲದ ಕ್ಯಾಂಟೀನ್‌ದಲ್ಲಿ ಬೆಳಗ್ಗೆ ಉಪಾಹಾರ, ಹಾಲು, ಮಧ್ಯಾಹ್ನ ಚಪಾತಿ, ರೊಟ್ಟಿ ಪಲ್ಯ, ನುಚ್ಚು ಮಜ್ಜಿಗೆ, ರಾತ್ರಿ ಚಪಾತಿ ಪಲ್ಯ, ಸಾರು-ಅನ್ನ ಕೊಡುತ್ತಿದ್ದರು. ಈ ಬಾರಿ ಕ್ಯಾಂಟೀನ್ ಶುರುವಾಗಲೇ ಇಲ್ಲ. ಹೀಗಾಗಿ ಊಟ, ಉಪಾಹಾರಕ್ಕೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. 15 ದಿನದಿಂದ ಹೀಗೆ ಇದ್ದೇವೆ, ಎಷ್ಟು ದಿನ ಅಂತ ಹೀಗೆ ಇರುವುದು. ಎಲ್ಲರೂ ತಂದ ದುಡ್ಡು ಸಹ ಖಾಲಿಯಾಗುತ್ತಾ ಬಂದಿದೆ ಎಂದು ಚಿಂತೆಗೀಡಾಗಿದ್ದಾರೆ ವಿದ್ಯಾರ್ಥಿಗಳು.ಗುರುಕುಲದಲ್ಲಿ 36 ಕೊಠಡಿಗಳು ಇದ್ದು, ಒಬ್ಬೊಬ್ಬ ವಿದ್ಯಾರ್ಥಿಗಳಿಗೆ ಒಂದೊಂದು ಕೊಠಡಿ ನೀಡಿದ್ದಾರೆ. ವಿದ್ಯಾಭ್ಯಾಸ ಮಾಡಿಸುವ ಗುರುಗಳಿಗೆ ಪ್ರತ್ಯೇಕ ಮನೆಗಳು ಇವೆ. ಈಗ ನಿರ್ವಹಣೆ ಕೊರತೆಯಿಂದ ಗುರುಕುಲ ತುಂಬಾ ಹುಲ್ಲು ಬೆಳೆದಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೊಠಡಿಗೆ 10 ಅಡಿ ಉದ್ದ ಹಾವು ಸಹ ಬಂದಿವೆ. ಹೀಗಾಗಿ ಭಯದ ವಾತಾವರಣ ಇದೆ. ಮುಂದೆ ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದವರು ಇದನ್ನು ಹೇಗೆ ನಿರ್ವಹಣೆ ಮಾಡುತ್ತಾರೋ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಂಗೀತ ಪ್ರೇಮಿಗಳು.
ಗುರುಕುಲದಲ್ಲಿ ಮೂಲಭೂತ ಸೌಕರ್ಯಗಳನ್ನು ಬಂದ್ ಮಾಡಿದ್ದರಿಂದ ತೀವ್ರ ಸಮಸ್ಯೆಯಾಗಿದೆ. ಹೊರಗೆ ಬಂದರೆ ಹಾವು ಚೇಳುಗಳ ಕಾಟ, ರಾತ್ರಿ ಕರೆಂಟ್ ಇರಲ್ಲ. ಸಂಗೀತ ಅಭ್ಯಾಸವೂ ಇಲ್ಲದಿರುವುದರಿಂದ ಭವಿಷ್ಯದ ಕುರಿತು ತೀವ್ರ ಚಿಂತೆಯಾಗಿದೆ ಎಂದು ವಿದ್ಯಾರ್ಥಿ ಪ್ರತೀಕ ಕಲಬುರಗಿ ಹೇಳಿದರು.ಸರ್ಕಾರ ಗುರುಕುಲವನ್ನು ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಸೇರ್ಪಡೆ ಮಾಡಿರುವುದರಿಂದ ಗುರುಕುಲದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ. ವಿವಿಯ ಕುಲಪತಿಗೆ ಹಲವಾರು ಬಾರಿ ಫೋನ್ ಮಾಡಿದರೂ ಅವರು ನನ್ನ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ವಾನ್ ಉಸ್ತಾದ ಫಯಾಜ್ ಖಾನ್ ಹೇಳಿದರು.