ವಿವಿಧ ಸೌಲಭ್ಯ ಪಡೆಯಲು ಸಮುದಾಯ ಜಾಗೃತಿ ಮೂಡಿಸಿ: ಪಲ್ಲವಿ

| Published : Feb 15 2025, 12:30 AM IST

ಸಾರಾಂಶ

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ನಿಗದಿಪಡಿಸಲಾಗಿದ್ದ ಗುರಿಗಿಂತ ಅರ್ಜಿಗಳು ಕಡಿಮೆ ಸಲ್ಲಿಕೆಯಾಗಿದ್ದು, ಈ ಸಂಬಂಧ ತಳಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಜಿ.ಪಲ್ಲವಿ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಲೆಮಾರಿ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸ್ವಯಂ ಉದ್ಯೋಗ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ ಹಾಗೂ ಮೈಕ್ರೋ ಕ್ರೆಡಿಟ್ ಯೋಜನೆಗಳಡಿ ನಿಗದಿತ ಗುರಿಗಿಂತ ಅರ್ಜಿಗಳ ಸಲ್ಲಿಕೆ ಕಡಿಮೆಯಾಗಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.

2023-24ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆಯಡಿ ನಿಗದಿಪಡಿಸಿದ 24ರ ಭೌತಿಕ ಗುರಿಯಲ್ಲಿ 19 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದೆ. ಉದ್ಯಮಶೀಲತಾ ಯೋಜನೆಯಡಿ 11ರ ಗುರಿಯಲ್ಲಿ 6 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ 9ರ ಗುರಿಯಲ್ಲಿ 7 ಅರ್ಜಿಗಳು ಸಲ್ಲಿಕೆಯಾಗಿದೆ. ಹಾಗೆಯೇ ಮೈಕ್ರೋ ಕ್ರೆಡಿಟ್ ಯೋಜನೆಯಡಿ 35 ಗುರಿಯಲ್ಲಿ ಒಂದೂ ಅರ್ಜಿಗಳು ಸಹ ಸಲ್ಲಿಕೆಯಾಗಿಲ್ಲ. ಇದರಿಂದ ಯಾರೂ ಸಹ ಸಾಲ ಹಾಗೂ ಸಹಾಯಧನ ಪಡೆಯಲು ಮುಂದೆ ಬರುತ್ತಿಲ್ಲವೇ ಎಂದು ಪಲ್ಲವಿ ಪ್ರಶ್ನಿಸಿದರು.

2024-25ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆಯಡಿ ನಿಗದಿಪಡಿಸಿದ 111 ಗುರಿಯಲ್ಲಿ 51 ಅರ್ಜಿಗಳು ಸಲ್ಲಿಕೆಯಾಗಿದೆ. ಉದ್ಯಮಶೀಲತಾ ಯೋಜನೆಯಡಿ 14ರ ಗುರಿಯಲ್ಲಿ 12 ಅರ್ಜಿಗಳು ಸಲ್ಲಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ 19 ಅರ್ಜಿಗಳು ಸಲ್ಲಿಕೆಯಾಗಿದೆ. ಮೈಕ್ರೋ ಕ್ರೆಡಿಟ್ ಯೋಜನೆಯಡಿ 34ರ ಗುರಿಯಲ್ಲಿ ಒಂದು ಅರ್ಜಿಯೂ ಸಹ ಸಲ್ಲಿಕೆಯಾಗಿಲ್ಲ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಯಾಯ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿಯೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿ.ಪಲ್ಲವಿ ಸಲಹೆ ನೀಡಿದರು.

ಈಗಾಗಲೇ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಕೊಡಗು ಜಿಲ್ಲೆಗೆ 2.60 ಕೋಟಿ ರು. ಬಿಡುಗಡೆಯಾಗಿದೆ. ಪ್ರಗತಿ ಸಾಧಿಸಲು ತೊಡಕುಗಳಿದ್ದಲ್ಲಿ ಅನುದಾನವನ್ನು ವಾಪಸ್‌ ನೀಡಿದಲ್ಲಿ ಬೇರೊಂದು ಜಿಲ್ಲೆಗೆ ಬಳಕೆ ಮಾಡಬಹುದು. ಆ ನಿಟ್ಟಿನಲ್ಲಿ ವರದಿ ನೀಡುವಂತೆ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರು ನಿರ್ದೇಶನ ನೀಡಿದರು.

ಸರ್ಕಾರ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ವಸತಿ ಶಾಲೆ ಪ್ರವೇಶಕ್ಕೆ ಶೇ.10ರಷ್ಟು ಮೀಸಲಾತಿ ಕಲ್ಪಿಸುತ್ತಿದೆ. ಅದನ್ನು ಅಲೆಮಾರಿ ಜನಾಂಗದವರಿಗೆ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಮಾಡಬೇಕು. ಅಲೆಮಾರಿ ಸಮುದಾಯದವರ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕು. ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಬಸವನಹಳ್ಳಿಯ ಮೇದಾರ ಕಾಲೋನಿ, ದಿಡ್ಡಳ್ಳಿಯ ಪುನರ್ ವಸತಿ ಕೇಂದ್ರ, ಹಾಗೆಯೇ ದೊಡ್ಡಬೆಟ್ಟಗೇರಿಯ ಸೋಲಿಗ ಕಾಲೋನಿ, ತಿತಿಮತಿ ವ್ಯಾಪ್ತಿಯ ಬೊಂಬುಕಾಡು, ಮಾಲ್ದಾರೆ ವ್ಯಾಪ್ತಿಯ ಆಸ್ತನಹಾಡಿ, ಮದೆನಾಡು ಗ್ರಾ.ಪಂ. ವ್ಯಾಪ್ತಿಯ ಜೋಡುಪಾಲ ಹೀಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿವೇಶನ, ಮನೆ ಹಾಗೂ ಮೂಲ ಸೌಲಭ್ಯಕ್ಕೆ ಹೆಚ್ಚಿನ ಜನರು ಮನವಿ ಮಾಡಿದ್ದಾರೆ ಎಂದು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ವಿವರಿಸಿದರು.

ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಬಳಿಯ ರಾಂಪುರ ಬಳಿ 10 ಎಕರೆ, ವಿರಾಜಪೇಟೆ ತಾಲೂಕಿನ ಬಿರುನಾಣಿ ಬಳಿ 19 ಎಕರೆ ಹಾಗೂ ತೆರಾಳು ಬಳಿ 20 ಎಕರೆ ಜಾಗ ಗುರುತಿಸಲಾಗಿದೆ. ಒಟ್ಟು 280 ಎಕರೆ ಭೂಮಿ ಬೇಕಿದ್ದು, ಇದರಲ್ಲಿ 80 ಎಕರೆ ಜಾಗ ಗುರುತಿಸಲಾಗಿದೆ. ಇನ್ನೂ 200 ಎಕರೆ ಭೂಮಿ ಬೇಕಿದೆ ಎಂದು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ್, ಸಾಲ ಸೌಲಭ್ಯ ಕಲ್ಪಿಸುವ ಸಂಬಂಧ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಇದುವರೆಗೆ 5 ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಿದ್ದು, ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗಿವೆ ಎಂದರು.

ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ತಹಸೀಲ್ದಾರರು, ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

ಸಾರ್ವಜನಿಕರ ಅಹವಾಲು ಆಲಿಸಿದ ಅಧ್ಯಕ್ಷ

ಮಡಿಕೇರಿ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಜಿ.ಪಲ್ಲವಿ, ಸಮುದಾಯಗಳ ಅಹವಾಲು ಆಲಿಸಿ, ಮನವಿ ಪತ್ರ ಸ್ವೀಕರಿಸಿದರು.

ಈ ಸಂದರ್ಭ ಮಾತನಾಡಿದ ಕುಡಿಯರ ಮುತ್ತಪ್ಪ, ಕೊಡಗು ಜಿಲ್ಲೆಯಲ್ಲಿ ಕುಡಿಯ ಜನಾಂಗಕ್ಕೆ 5 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆದ್ದರಿಂದ ಕುಡಿಯ ಸಮುದಾಯವನ್ನು ಅಲೆಮಾರಿಗಳೆಂದು ಹೇಳದೆ ಆದಿವಾಸಿಗಳ ಪಟ್ಟಿಗೆ ಸೇರಿಸಬೇಕು ಎಂದರು.

ನಿಗಮದ ವಿಶೇಷ ಕರ್ತವ್ಯಾಧಿಕಾರಿ ಆನಂದ್ ಕುಮಾರ್, ಸೂಕ್ಷ್ಮ, ಸಣ್ಣ ಸಣ್ಣ ಸಮುದಾಯಗಳನ್ನು ಅಲೆಮಾರಿಗಳೆಂದು ಗುರುತಿಸಲಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಕೆ.ಕೆ.ದೇವಪ್ಪ ಮಾತನಾಡಿ, ಅಜಿಲ-ನಲಿಕೆ ಸಮಾಜವು ಸಂಪಾಜೆ, ಚೆಂಬು, ಜೋಡುಪಾಲ, ವಿರಾಜಪೇಟೆ ವ್ಯಾಪ್ತಿಯಲ್ಲಿ ಬರಲಿದ್ದು, ಸಣ್ಣ ಸಮುದಾಯವಾಗಿದೆ. ಈ ಸಮುದಾಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅಹವಾಲು ಆಲಿಸಿ ಮಾತನಾಡಿದ ಜಿ.ಪಲ್ಲವಿ, ಕೊಡಗು ಜಿಲ್ಲೆಗೆ ಮತ್ತೆ ಭೇಟಿ ನೀಡಲಾಗುವುದು. ಭೂ ಪ್ರದೇಶ ವಿಶಾಲವಾಗಿದ್ದು, ಇನ್ನೂ ಹೆಚ್ಚಿನ ಹಾಡಿಗಳಿಗೆ ಭೇಟಿ ನೀಡಿ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ, ಸಿದ್ದೇಗೌಡ, ಪ್ರೀತಿ ಚಿಕ್ಕಮಾದಯ್ಯ, ತೇಜಕುಮಾರ ಇತರರು ಇದ್ದರು.