ಕಸಾಪ ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಲು ಪೂರಕ ವಾತಾವರಣ ನಿರ್ಮಿಸಿ

| Published : Oct 23 2023, 12:15 AM IST / Updated: Oct 23 2023, 12:16 AM IST

ಸಾರಾಂಶ

ಗಜೇಂದ್ರಗಡ ಪಟ್ಟಣದ ಗವಿಮಠದಲ್ಲಿ ಭಾನುವಾರ ಕಸಾಪ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು.

ಗಜೇಂದ್ರಗಡದಲ್ಲಿ ಕಸಾಪ ತಾಲೂಕು ಕಾರ್ಯಕಾರಿ ಸಮಿತಿ ಸಭೆ

ಗಜೇಂದ್ರಗಡ:ಕಸಾಪ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಗಜೇಂದ್ರಗಡದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಹೀಗಾಗಿ ಜಿಲ್ಲಾ ಮಟ್ಟದ ಸಮ್ಮೇಳನದ ವಾತಾವರಣ ನಿರ್ಮಿಸಲು ಕಸಾಪ ತಾಲೂಕು ಘಟಕವು ವಾರದ ಚಿಂತನಗೋಷ್ಠಿ ಸೇರಿ ಸಾಹಿತ್ತಿಕ ಚಟುವಟಿಕೆಗಳನ್ನು ನಡೆಸಲು ಮುಂದಾಗಿ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.ಪಟ್ಟಣದ ಗವಿಮಠದಲ್ಲಿ ಭಾನುವಾರ ಕಸಾಪ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ಕೆಲ ದಿನಗಳಲ್ಲಿ ರಾಜ್ಯದ ಹಬ್ಬವಾದ ಕನ್ನಡ ರಾಜ್ಯೋತ್ಸವ ಆಗಮಿಸಲಿದೆ, ಈಗ ದಸರಾ ನಿಮಿತ್ತ ವಾರದ ಚಿಂತನಾ ಗೋಷ್ಠಿಗಳು ಸೇರಿ ಇನ್ನಿತರ ಸಾಹಿತ್ತಿಕ ಕಾರ್ಯಕ್ರಮಗಳನ್ನು ತಾಲೂಕು ಘಟಕದಿಂದ ನಡೆಯಬೇಕಿದ್ದವು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಸಾಹಿತ್ತಿಕ ಕಾರ್ಯಕ್ರಮಗಳು ನಡೆಯದ್ದರಿಂದ ತಾಲೂಕಿನಲ್ಲಿ ಸಾಹಿತ್ತಿಕ ವಾತಾವರಣ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಲೂಕಿನಲ್ಲಿ ಕಸಾಪದಿಂದ ಸಾಹಿತ್ತಿಕ ವಾತಾವರಣ ನಿರ್ಮಿಸಬೇಕಾದರೆ ಶಾಲಾ, ಕಾಲೇಜು, ಮನೆ, ಮನಗಳಲ್ಲಿ ಸಾಹಿತ್ತಿಕ ಕಾರ್ಯಕ್ರಮಗಳು ಕಸಾಪದಿಂದ ಆಯೋಜನೆ ಆಗಬೇಕಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕನರೊಂದಿಗೆ ಸಭೆ ಹಾಗೂ ಚರ್ಚೆಗಳನ್ನು ನಡೆಸುವ ಮೂಲಕ ತಾಲೂಕಿನಲ್ಲಿ ಸಾಹಿತ್ತಿಕ ವಾತಾವರಣ ನಿರ್ಮಿಸಬೇಕಿದೆ. ಅಂದಾಗ ಮಾತ್ರ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಲು ಸಹಕಾರಿಯಾಗಲಿದೆ. ಹೀಗಾಗಿ ತಿಂಗಳಲ್ಲಿ ಎರಡು ಬಾರಿ ಪಟ್ಟಣದ ಕಸಾಪ ಕಾರ್ಯಕ್ರಮ ಮತ್ತು ಸಭೆಗಳನ್ನು ಭಾಗವಹಿಸುವೆ ಎಂದು ಹೇಳಿದ ಜಿಲ್ಲಾಧ್ಯಕ್ಷರು ಶಾಲಾ, ಕಾಲೇಜುಗಳಲ್ಲಿ ಕಸಾಪದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿ ಎಂದರು.

ಗಜೇಂದ್ರಗಡ ಪಟ್ಟಣದಲ್ಲಿ ಕಸಾಪ ಜಿಲ್ಲಾ ಮಟ್ಟದ ಸಮ್ಮೇಳನವನ್ನು ನಡೆಸಲು ತಾಲೂಕು ಘಟಕದಿಂದ ಕಸಾಪ ಚಟುವಟಿಕೆಗಳನ್ನು ನಡೆಸಿದರೆ ಮಾತ್ರ ಜಿಲ್ಲಾ ಮಟ್ಟದ ಸಮ್ಮೇಳನವನ್ನು ನಡೆಸಲು ವಾತಾವರಣ ನಿರ್ಮಾಣವಾಗಲಿದೆ. ಹೀಗಾಗಿ ತಕ್ಷಣದಿಂದಲೇ ಕಸಾಪ ತಾಲೂಕು ಘಟಕದಿಂದ ಸಾಹಿತ್ತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿ ಎಂದು ವಿವೇಕಾನಂದಗೌಡ ಪಾಟೀಲ ಹೇಳಿದರು.

ಸಾಹಿತ್ತಿಕ ವಾತಾವರಣ ನಿರ್ಮಿಸಲು ಕಸಾಪ ಹೆಣಗಾಟ: ಹಿಂದಿನ ೫ ವರ್ಷದಲ್ಲಿ ತಾಲೂಕಿನಲ್ಲಿ ವಾರದ ಸಾಹಿತ್ಯ ಚಿಂತನಾಗೋಷ್ಠಿ, ಶಾಲೆ, ಮನೆಗಳಲ್ಲಿ ಕಸಾಪ ಕಾರ್ಯಕ್ರಮಗಳು ಜತೆಗೆ ಪುಸ್ತಕ ಬಿಡುಗಡೆ ಸೇರಿ ಅನೇಕ ಸಾಹಿತ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಸಾಪ ಅಧ್ಯಕ್ಷ ದಿ.ಈಶ್ವರಪ್ಪ ರೇವಡಿ ಅವರು ಕನ್ನಡ ಕಟ್ಟುವ ಕೆಲಸವನ್ನು ಕೈಗೊಂಡಿದ್ದರು. ಆದರೆ ಬಳಿಕ ನಡೆದ ಕಸಾಪ ಚುನಾವಣೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವಿವೇಕಾನಂದಗೌಡ ಪಾಟೀಲ ಅವರು ಗಜೇಂದ್ರಗಡ ತಾಲೂಕಿಗೂ ಸಹ ಹೊಸ ತಾಲೂಕಾಧ್ಯಕ್ಷರನ್ನು ನೇಮಕ ಮಾಡಿದರು. ಆರಂಭದಲ್ಲಿ ಕಸಾಪದಿಂದ ನಡೆದ ಕೆಲ ಕಾರ್ಯಕ್ರಮಗಳು ದಿನಕಳೆದಂತೆ ಕಸಾಪ ಕಾರ್ಯಕ್ರಮಗಳ ಮೇಲೆ ಮೋಡ ಕವಿದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಾಹಿತ್ಯಾಸಕ್ತರ ವಲಯದಲ್ಲಿ ಕಸಾಪ ನಡೆಗೆ ಅಸಮಾಧಾನ ವ್ಯಕ್ತವಾಗಿತ್ತು. ಈಗ ಜಿಲ್ಲಾ ಮಟ್ಟದ ಸಮ್ಮೇಳನ ಪಟ್ಟಣದಲ್ಲಿ ನಡೆಯಲು ಉದ್ದೇಶಿಸಲಾಗಿದೆ. ಆದರೆ ಪ್ರಸ್ತುತ ದಿನದಲ್ಲಿಯೂ ಸಹ ಸಾಹಿತ್ತಿಕ ವಾತಾವರಣ ನಿರ್ಮಾಣಕ್ಕಾಗಿ ಕಸಾಪ ಹೆಣಗಾಡುತ್ತಿರುವುದು ವಿಪರ್ಯಾಸ ಎಂದು ಸಾಹಿತ್ಯಾಕಸ್ತರು ಬೇಸರದ ನುಡಿಗಳನ್ನಾಡುತ್ತಿದ್ದಾರೆ.

ಈ ವೇಳೆ ಕಸಾಪ ತಾಲೂಕಾಧ್ಯಕ್ಷ ಎ.ಪಿ.ಗಾಣಿಗೇರ, ರೋಣ ಕಸಾಪ ತಾಲೂಕಾಧ್ಯಕ್ಷ ರಮಾಕಾಂತ್ ಕಮತಗಿ, ಶಿವಾನಂದ ಗಿಡ್ನಂದಿ, ಬಸವರಾಜ ನೆಲಜೇರಿ, ಅಶೋಕ ಹಾದಿ, ಶಶಿಕಾಂತ ಕೋರ್ಲಳ್ಳಿ, ಟಿ.ಎಸ್.ಗೊರವರ, ಪುಂಡಲಿಂಕ ಕಲ್ಲಿಗನೂರ, ಬಿ.ಎ.ಕೆಂಚರೆಡ್ಡಿ, ಎಸ್.ಆರ್.ಇಟಗಿ, ಬಿ.ಟಿ.ಹೊಸಮನಿ, ಎ.ಎಸ್.ಕವಡಿಮಟ್ಟಿ ಸೇರಿ ಇತರರು ಇದ್ದರು.