ಕುಮಾರಸ್ವಾಮಿ ದೇಗುಲಕ್ಕೆ ನೂತನ ಟ್ರಸ್ಟ್ ರಚಿಸಿ: ವೆಂಕಟರಾವ್ ಘೋರ್ಪಡೆ

| Published : Feb 14 2024, 02:21 AM IST

ಸಾರಾಂಶ

ದೇವಸ್ಥಾನದ ಜಾಗವನ್ನು ಹದ್ದುಬಸ್ತುಗೊಳಿಸುವುದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅಗತ್ಯವಿದೆ.

ಸಂಡೂರು: ಸಂಡೂರಿನ ಸ್ವಾಮಿಮಲೈ ಬೆಟ್ಟದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳು ದೊರೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ದೇವಸ್ಥಾನ ಸುವ್ಯವಸ್ಥಿತ ಆಡಳಿತಕ್ಕಾಗಿ ನೂತನ ಟ್ರಸ್ಟ್ ರಚನೆಯ ಅಗತ್ಯವಿದೆ ಎಂದು ರಾಜವಂಶಸ್ಥ ವೆಂಕಟರಾವ್ ಘೋರ್ಪಡೆ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಆಡಳಿತವನ್ನು ಕುಮಾರಸ್ವಾಮಿ ದೇವಸ್ಥಾನ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಈ ಬಾರಿಯ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಹಲವು ರೀತಿಯ ಅವ್ಯವಸ್ಥೆ ಉಂಟಾಗಿದ್ದು, ಜಾತ್ರೆಗೆ ಬಂದ ಭಕ್ತರಿಗೆ ದರ್ಶನಕ್ಕೆ ತೊಂದರೆಯಾಗಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಹಲವರು ಪ್ರವೇಶಿಸಿದ್ದಾರೆ. ದರ್ಶನದ ಟಿಕೆಟ್ ಹಾಗೂ ಪ್ರಸಾದದ ದರವನ್ನು ಹೆಚ್ಚಿಸಿದ್ದರ ಕುರಿತು ಸಾರ್ವಜನಿಕರು ದೂರಿದ್ದಾರೆ ಎಂದರು.

ದೇವಸ್ಥಾನದ ಆಡಳಿತದ ಅಧಿಕಾರ ಘೋರ್ಪಡೆ ರಾಜವಂಶಸ್ಥರಿಗೆ ದೊರೆತದ್ದು ೧೭೨೬ರಲ್ಲಿ. ಸ್ವಾತಂತ್ರ್ಯ ನಂತರ ರಾಜರಿಗೆ ನೀಡುತ್ತಿದ್ದ ವಿಶೇಷ ಸೌಲತ್ತುಗಳನ್ನು ಸರ್ಕಾರ ರದ್ದುಗೊಳಿಸಿದ ಮೇಲೆ ನಮ್ಮ ತಂದೆಯವರಾದ ಯಶವಂತರಾವ್ ಘೋರ್ಪಡೆಯವರು ೧೯೭೨ರಲ್ಲಿ ಸುಮಾರು ೪೫೦೦ ಎಕರೆ ಅರಣ್ಯ ಪ್ರದೇಶವನ್ನು ಸರ್ಕಾರಕ್ಕೆ ಮರಳಿಸಿದರು. ಅದಕ್ಕೆ ಪ್ರತಿಫಲವಾಗಿ ದೇವರಾಜ್ ಅರಸು ಅವರ ನೇತೃತ್ವದ ಸರ್ಕಾರ ಕುಮಾರಸ್ವಾಮಿ ದೇವಸ್ಥಾನಕ್ಕೆ ೫೦೦ ಎಕರೆ ಜಾಗವನ್ನು ಬಿಟ್ಟು ಕೊಟ್ಟಿದೆ. ಈ ಜಾಗದಲ್ಲಿ ಕೆಲ ಪ್ರದೇಶ ಈಗ ಒತ್ತುವರಿಯಾಗಿದೆ. ಸರ್ಕಾರ ಇದನ್ನು ತೆರವುಗೊಳಿಸಿ, ಸರ್ವೆ ನಡೆಸಿ, ದೇವಸ್ಥಾನಕ್ಕೆ ಅದರ ಜಾಗವನ್ನು ಒಪ್ಪಿಸಬೇಕಿದೆ ಎಂದರು. ದೇವಸ್ಥಾನದ ಜಾಗವನ್ನು ಹದ್ದುಬಸ್ತುಗೊಳಿಸುವುದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅಗತ್ಯವಿದೆ. ದೇವಸ್ಥಾನದ ೫೦೦ ಎಕರೆ ಜಾಗ ದೇವಸ್ಥಾನಕ್ಕೆ ದೊರೆತರೆ, ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು. ಈ ಕುರಿತಂತೆ ನಾನು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿಯವರಿಗೆ ಪತ್ರ ಬರೆದಿದ್ದೇನೆ. ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಪತ್ರವನ್ನು ಈಗ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗಿದೆ ಎಂದರು.ಈ ಟ್ರಸ್ಟ್‌ನಲ್ಲಿ ೬ ಜನರ ಸದಸ್ಯರಿರಬೇಕು. ಅದರಲ್ಲಿ ನಮ್ಮ ತಂದೆಯವರಾದ ದಿ. ಯಶವಂತರಾವ್ ಘೋರ್ಪಡೆಯವರ ನಾಲ್ಕು ಮಕ್ಕಳ ಕುಟುಂಬದವರಲ್ಲಿ ಒಬ್ಬೊಬ್ಬರನ್ನು ಟ್ರಸ್ಟಿಗಳನ್ನಾಗಿ, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರನ್ನು ಪದನಿಮಿತ್ತ ಸದಸ್ಯರನ್ನಾಗಿಸಬೇಕು. ಇದರಿಂದ ದೇವಸ್ಥಾನದ ಜಾಗದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ. ದೇವಸ್ಥಾನವೂ ಅಭಿವೃದ್ಧಿ ಕಾಣಲಿದೆ ಎಂದು ಪತ್ರದಲ್ಲಿ ತಿಳಿಸಿದ್ದೇನೆ. ಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು.