ಇ-ಸ್ವತ್ತು ವಿತರಿಸಿ ಬಡವರಿಗೆ ಅನುಕೂಲ ಕಲ್ಪಿಸಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

| Published : Feb 14 2024, 02:21 AM IST

ಇ-ಸ್ವತ್ತು ವಿತರಿಸಿ ಬಡವರಿಗೆ ಅನುಕೂಲ ಕಲ್ಪಿಸಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ಜನರು ಆಸ್ತಿ ತೆರಿಗೆ ಪಾವತಿಸಿ ಇ-ಆಸ್ತಿ ದಾಖಲೆ ಪಡೆಯಲು ಬಂದಾಗ ಈ ಹಿಂದೆ ಬಡಾವಣೆ ನಕ್ಷೆ, ಮನೆ ನಕ್ಷೆ, ಮನೆ ನಿರ್ಮಾಣ ಪರವಾನಗಿ ದಾಖಲೆಗಳನ್ನು ಕೇಳದೆ ಪ್ರಾಯೋಗಿಕವಾದ ದಾಖಲೆಗಳನ್ನಷ್ಟೆ ಪರಿಗಣಿಸಿ ಜನರಿಗೆ ಅಲೆದಾಡಿಸದೆ ಇ-ಆಸ್ತಿ ಖಾತೆ ಮಾಡಿಕೊಡಲು ಸೂಚನೆ ನೀಡಿದರು. ಜನರು ಆಸ್ತಿ ತೆರಿಗೆ ಕಟ್ಟಿ ಇ-ಆಸ್ತಿ ದಾಖಲೆ ಪಡೆಯುವುದರಿಂದ ಪರೋಕ್ಷವಾಗಿ ಪಾಲಿಕೆಗೆ ಆದಾಯವು ಬರಲಿದ್ದು ನೀರಿನ ಶುಲ್ಕ ವಸೂಲಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾನಗರ ಪಾಲಿಕೆಯಿಂದ ಮಾರ್ಚ್ ಅಂತ್ಯದವರೆಗೆ ಎಲ್ಲಾ ವಾರ್ಡ್‌ಗಳಲ್ಲಿನ ಆಸ್ತಿಗಳಿಗೆ ಇ-ಆಸ್ತಿ ಸೇವೆ ದಾಖಲೆ ನೀಡುತ್ತಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ನಿಟ್ಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿಸುವ ಮಾಲೀಕರಿಗೆ ಮನೆ ಬಾಗಿಲಿಗೆ ಇ-ಆಸ್ತಿ ಸೇವೆ ದಾಖಲೆ ಒದಗಿಸುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ ಈ ಹಿಂದೆ 2012 ರಲ್ಲಿ ದಾವಣಗೆರೆ ನಗರದಲ್ಲಿ 45 ಸಾವಿರ ಜನರಿಗೆ ಆಶ್ರಯ ಯೋಜನೆಯಡಿ ಅವರು ವಾಸಿಸುವ ಜಾಗಕ್ಕೆ ಹಕ್ಕುಪತ್ರ ನೀಡಲಾಗಿದೆ. ಆ ಸಂದರ್ಭದಲ್ಲಿ ಯಾವುದೇ ಮನೆ ಸಂಖ್ಯೆ ಇರಲಿಲ್ಲ. ಅವರೆಲ್ಲರೂ ಖಾತೆ ಮಾಡಿಸಿಕೊಂಡಿದ್ದು ಎಲ್ಲ ಹಕ್ಕುಗಳನ್ನು ಹೊಂದಲು ಇ-ಆಸ್ತಿ ದಾಖಲೆ ಬಹಳ ಪ್ರಮುಖವಾಗಿರುತ್ತದೆ. ಆ ಸಂದರ್ಭದಲ್ಲಿ ವಾಸಿಸುತ್ತಿದ್ದ ಮನೆ ಮಾಲೀಕರಿಗೆ ಹಕ್ಕುಪತ್ರ ವಿತರಣೆಗೆ ಇನ್ನೂ ಕೆಲವು ಬಾಕಿ ಉಳಿದಿದೆ ಎಂದರು.

ಜನರು ಆಸ್ತಿ ತೆರಿಗೆ ಪಾವತಿಸಿ ಇ-ಆಸ್ತಿ ದಾಖಲೆ ಪಡೆಯಲು ಬಂದಾಗ ಈ ಹಿಂದೆ ಬಡಾವಣೆ ನಕ್ಷೆ, ಮನೆ ನಕ್ಷೆ, ಮನೆ ನಿರ್ಮಾಣ ಪರವಾನಗಿ ದಾಖಲೆಗಳನ್ನು ಕೇಳದೆ ಪ್ರಾಯೋಗಿಕವಾದ ದಾಖಲೆಗಳನ್ನಷ್ಟೆ ಪರಿಗಣಿಸಿ ಜನರಿಗೆ ಅಲೆದಾಡಿಸದೆ ಇ-ಆಸ್ತಿ ಖಾತೆ ಮಾಡಿಕೊಡಲು ಸೂಚನೆ ನೀಡಿದರು. ಜನರು ಆಸ್ತಿ ತೆರಿಗೆ ಕಟ್ಟಿ ಇ-ಆಸ್ತಿ ದಾಖಲೆ ಪಡೆಯುವುದರಿಂದ ಪರೋಕ್ಷವಾಗಿ ಪಾಲಿಕೆಗೆ ಆದಾಯವು ಬರಲಿದ್ದು ನೀರಿನ ಶುಲ್ಕ ವಸೂಲಿಯಾಗುತ್ತದೆ. ವಲಯವಾರು ಪ್ರಗತಿ ವರದಿಯನ್ನು ಪ್ರತಿ ವಾರ ನೀಡಬೇಕೆಂದ ಸಚಿವರು ಅನುಮೋದಿಸಿದ ದಾಖಲೆ ಎಷ್ಟು, ತಿರಸ್ಕರಿಸಿದ ಆಸ್ತಿ ಎಷ್ಟು, ಇದಕ್ಕೆ ಕಾರಣವೇನು ಎಂಬ ವರದಿಯನ್ನು ಪ್ರತಿ ವಾರ ನೀಡಲು ತಿಳಿಸಿದರು.

ದಾವಣಗೆರೆ ಜಿಲ್ಲೆ ಪ್ರಥಮ;

ಕಂದಾಯ ಇಲಾಖೆಯಡಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಅದೇ ರೀತಿ ಪಾಲಿಕೆಯಿಂದ ಎಲ್ಲಾ ನಾಗರಿಕರ ಸೇವೆಗಳನ್ನು ಆನ್‌ಲೈನ್ ಮಾಡುವ ನಿಟ್ಟಿನಲ್ಲಿ ಕಚೇರಿ ಗಣಕೀಕರಣವನ್ನು ಆದಷ್ಟು ಬೇಗ ಮಾಡಿ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ ಜನಸ್ನೇಹಿ ಆಡಳಿತ ನೀಡಲು ಸರ್ಕಾರ ಬದ್ದವಾಗಿದ್ದು ಮನೆ ಬಾಗಿಲಿಗೆ ಸೇವೆ ಒದಗಿಸಲಾಗುತ್ತಿದೆ. ನನ್ನ ಆಸ್ತಿ, ನನ್ನ ದಾಖಲೆ, ನನ್ನ ಹಕ್ಕು ಘೋಷವಾಕ್ಯದಡಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಆಸ್ತಿ ದಾಖಲೆ ನೀಡಲು ಫೆಬ್ರವರಿ 13 ರಿಂದ ಚಾಲನೆ ನೀಡಲಾಗಿದೆ ಎಂದರು.

ಇ-ಆಸ್ತಿ ದಾಖಲೆ ಪಡೆಯುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಇದರಿಂದ ಆಸ್ತಿ ಮಾಲೀಕರಿಗೆ ಶೇ.100 ರಷ್ಟು ಮಾಲಿಕತ್ವ ಸಿಗಲಿದೆ. ಇದರಿಂದ ಆಸ್ತಿ ಮಾರಾಟ, ಖರೀದಿ ಮತ್ತು ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಪಡೆಯಲು ಅನುಕೂಲವಾಗುತ್ತದೆ. ನಿವೇಶನ ಹಕ್ಕುಪತ್ರ ಪಡೆದವರು ಸಹ ಇ-ಆಸ್ತಿ ಪಡೆದುಕೊಳ್ಳಬೇಕು. ಈ ಕಾಯಿದೆಯು 2021 ರಿಂದ ಜಾರಿಗೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ 1.75 ಲಕ್ಷ ಆಸ್ತಿಗಳಲ್ಲಿ ಇಲ್ಲಿಯವರೆಗೆ ಕೇವಲ 30 ಸಾವಿರ ಆಸ್ತಿಗೆ ಇ-ಆಸ್ತಿ ದಾಖಲೆಗಳನ್ನು ಪಡೆಯಲಾಗಿದೆ. ಇನ್ನೂ 1.45 ಲಕ್ಷ ಇ-ಸ್ವತ್ತುಗಳನ್ನು ವಿತರಣೆ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತೆರಿಗೆ ಹಣಕಾಸು ಸಮಿತಿ ಅಧ್ಯಕ್ಷ ಉದಯಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ಸವಿತ ಗಣೇಶ್, ನಾಗರತ್ನಮ್ಮ, ಜಯಮ್ಮಗೋಪಿನಾಥ್, ಚಮನ್‌ಸಾಬ್, ಮಂಜುನಾಥ, ನಾಗರಾಜ, ನಗರ ಯೋಜನಾ ಅಧ್ಯಕ್ಷ ಲತೀಫ್, ಮುಖಂಡರಾದ ನಾಗಭೂ಼ಷಣ್, ಶೇಖರಪ್ಪ ಹಾಗೂ ಇನ್ನಿತರರಿದ್ದರು. ಪಾಲಿಕೆ ಆಯುಕ್ತರಾದ ರೇಣುಕಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಾಲಿಕೆ ಹಣ ಅಭಿವೃದ್ದಿಗೆ ಬಳಸಿ:

29, 32, 35, 36 ನೇ ವಾರ್ಡ್‌ಗಳಲ್ಲಿ ರು.250 ಲಕ್ಷಗಳ ವಿವಿಧ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳ ಈಗಾಗಲೇ ಸರ್ಕಾರದ ಅನುದಾನದಿಂದ ನಿರ್ಮಿಸಿದ್ದು ಪಾಲಿಕೆ ಅನುದಾನದಿಂದ ಮಾಡುವ ಪ್ರಮುಖ ರಸ್ತೆಗಳು ಬಾಕಿ ಉಳಿದಿಲ್ಲ. ಪಾಲಿಕೆಯ ಅನುದಾನದಲ್ಲಿ ವಾರ್ಡ್ ರಸ್ತೆ, ಗುಂಡಿಮುಚ್ಚುವ ಕಾಮಗಾರಿ, ಬ್ರಿಡ್ಜ್, ಚರಂಡಿ ಕಾಮಗಾರಿ ತೆಗೆದುಕೊಳ್ಳಲು ತಿಳಿಸಿ ಪಾಲಿಕೆಗೆ ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಅನುದಾನ ಸರ್ಕಾರದಿಂದ ಬರಲಿದೆ.

ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ