ಸಾರಾಂಶ
ತಲೆತಲಾಂತರದಿಂದ ಹೆಣ್ಣನ್ನು ಸಮಾಜದ ಮಗಳಾಗಿ ಕಾಣುತ್ತಿದ್ದು, ಈಗಲೂ ಅದೇ ಗೌರವದೊಂದಿಗೆ ಮತ್ತು ಹೆಮ್ಮೆಯೊಂದಿಗೆ ಸ್ವೀಕರಿಸಬೇಕು.
ಬಳ್ಳಾರಿ: ಹೆಣ್ಣು ಮಗುವಿನ ಮಹತ್ವ ಎಲ್ಲರೂ ಅರಿಯಬೇಕು. ಹೆಣ್ಣು ಭ್ರೂಣಲಿಂಗ ಪತ್ತೆಯು ಕಾನೂನಿನ ಪ್ರಕಾರ ಅಪರಾಧ. ಕಾನೂನು ಉಲ್ಲಂಘಿಸಿದಲ್ಲಿ ಜೈಲು ಶಿಕ್ಷೆ ಮತ್ತು ದಂಡವಿದೆ. ಈ ಕುರಿತು ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ಸಂಯುಕ್ತಾಶ್ರಯದಲ್ಲಿ ವೈದ್ಯಾಧಿಕಾರಿಗಳಿಗೆ, ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್ ಕೇಂದ್ರಗಳ ತಜ್ಞರಿಗೆ ದತ್ತು ಕಾಯ್ದೆ-2022, ಮಮತೆಯ ತೊಟ್ಟಿಲು, ಪಿಸಿಪಿಎನ್‍ಡಿಟಿ-ಕಾಯ್ದೆ-1994 ಕಾಯ್ದೆಗಳ ಕುರಿತು ವಿಮ್ಸ್ ನ ಬಿ.ಸಿ.ರಾಯ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಕುಟುಂಬದ ಜವಾಬ್ದಾರಿಯನ್ನು ತ್ಯಾಗದಿಂದ ನಿರ್ವಹಿಸುತ್ತಾಳೆ. ತಲೆತಲಾಂತರದಿಂದ ಹೆಣ್ಣನ್ನು ಸಮಾಜದ ಮಗಳಾಗಿ ಕಾಣುತ್ತಿದ್ದು, ಈಗಲೂ ಅದೇ ಗೌರವದೊಂದಿಗೆ ಮತ್ತು ಹೆಮ್ಮೆಯೊಂದಿಗೆ ಸ್ವೀಕರಿಸಬೇಕು ಎಂದು ತಿಳಿಸಿದರು.ಲಿಂಗಾನುಪಾತ ಸಮವಾಗಿರದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳಾಗುವುದರ ಜೊತೆಗೆ, ಹೆಣ್ಣಿನ ಮೇಲೆ ದೌರ್ಜನ್ಯ ಉಂಟಾಗುವ ಸಾಧ್ಯತೆ ಇದೆ. ಭ್ರೂಣ ಹತ್ಯೆ ಮಾಡುವ ಸಾಧ್ಯತೆ ಇರುವುದರಿಂದ ಕಾಯ್ದೆಯ ಕಠಿಣತೆಯ ಜೊತೆಗೆ ಮಾನವೀಯತೆ ಕುರಿತು ಹೆಚ್ಚು ಜಾಗೃತಿ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅರವಳಿಕೆ ತಜ್ಞೆ ಡಾ.ಶ್ವೇತಾ ಸಂಕನೂರು ಹಾಗೂ ವಕೀಲರಾದ ಸಿ.ಎಂ.ಗುರುಬಸವರಾಜ್ ತರಬೇತಿ ಕಾರ್ಯಾಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.ವಿಮ್ಸ್ ನಿರ್ದೇಶಕ ಡಾ. ಜಿ.ಟಿ. ಗಂಗಾಧರ ಗೌಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಕೆ.ಎಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್. ಬಸರೆಡ್ಡಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದೂರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ, ಸಿಡಿಪಿಒ ನಾಗರಾಜ, ಡಾ.ಅಬ್ದುಲ್ಲಾ, ಡಾ.ಇಂದ್ರಾಣಿ, ಡಾ.ದುರ್ಗಪ್ಪ, ಚನ್ನಬಸವ ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ), ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.