ಇಂದಿರಾ ಗಾಜಿನ ಮನೆಯಲ್ಲಿ ಚಿತ್ರಕಲಾ ಜಗತ್ತು ಸೃಷ್ಟಿ!

| Published : Nov 30 2023, 01:15 AM IST

ಸಾರಾಂಶ

ಇಲ್ಲಿಯ ಇಂದಿರಾಗಾಜಿನ ಮನೆ ಆವರಣದಲ್ಲಿ ಬುಧವಾರ ಅದ್ಭುತ ಚಿತ್ರಕಲಾ ಜಗತ್ತೇ ಸೃಷ್ಟಿಯಾಗಿತ್ತು. ನೂರಾರು ಶಾಲೆಗಳ ಸಾವಿರಾರು ಮಕ್ಕಳು ತರಹೇವಾರಿ ಬಣ್ಣಗಳ ಧಿರಿಸು ಧರಿಸಿ ತಮ್ಮ ಕಲ್ಪನೆಯ ಚಿತ್ರಗಳನ್ನು ಕ್ಯಾನ್ವಾಸ್‌ ಮೇಲೆ ಒಡಮೂಡಿಸುವ ಮೂಲಕ ಸಂಭ್ರಮಿಸಿದರು. ಮಕ್ಕಳು ಬಣ್ಣದ ಲೋಕವೊಂದರಲ್ಲಿ ಮಿಂದು ತಮ್ಮ ಪ್ರತಿಭೆ, ಬುದ್ಧಿಮತ್ತೆ, ಪ್ರಾವಿಣ್ಯತೆ ಪ್ರದರ್ಶಿಸಿ ಮೆರೆದರು

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿಯ ಇಂದಿರಾಗಾಜಿನ ಮನೆ ಆವರಣದಲ್ಲಿ ಬುಧವಾರ ಅದ್ಭುತ ಚಿತ್ರಕಲಾ ಜಗತ್ತೇ ಸೃಷ್ಟಿಯಾಗಿತ್ತು. ನೂರಾರು ಶಾಲೆಗಳ ಸಾವಿರಾರು ಮಕ್ಕಳು ತರಹೇವಾರಿ ಬಣ್ಣಗಳ ಧಿರಿಸು ಧರಿಸಿ ತಮ್ಮ ಕಲ್ಪನೆಯ ಚಿತ್ರಗಳನ್ನು ಕ್ಯಾನ್ವಾಸ್‌ ಮೇಲೆ ಒಡಮೂಡಿಸುವ ಮೂಲಕ ಸಂಭ್ರಮಿಸಿದರು. ಮಕ್ಕಳು ಬಣ್ಣದ ಲೋಕವೊಂದರಲ್ಲಿ ಮಿಂದು ತಮ್ಮ ಪ್ರತಿಭೆ, ಬುದ್ಧಿಮತ್ತೆ, ಪ್ರಾವಿಣ್ಯತೆ ಪ್ರದರ್ಶಿಸಿ ಮೆರೆದರು

ಮಕ್ಕಳಲ್ಲಿನ ಸೃಜನಶೀಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಮಕ್ಕಳ ದಿನಾಚರಣೆ ನಿಮಿತ್ತ ಪ್ರತಿ ವರ್ಷ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವತಿಯಿಂದ ಚಿತ್ರಕಲಾ ಸ್ಪರ್ಧೆ ಏರ್ಪಡಿಸುತ್ತಿದೆ. ಅಂತೆಯೇ, ಈ ಬಾರಿ 5ನೇ ವರ್ಷದ ಚಿತ್ರಕಲಾ ಸ್ಪರ್ಧೆಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ 2800ಕ್ಕೂ ಹೆಚ್ಚು ಪ್ರೌಢಶಾಲೆಯ ವಿದ್ಯಾರ್ಥಿಗಳು ವೈವಿಧ್ಯಮಯ ಚಿತ್ರಗಳನ್ನು ಬಿಡಿಸಿ ಅದಕ್ಕೆ ಬಣ್ಣ ತುಂಬಿದರು.

ಸ್ಪರ್ಧಾ ವಿಷಯಗಳು

ಎಂಟನೇ ತರಗತಿ ಮಕ್ಕಳು ಸ್ವಚ್ಛ ಭಾರತದ ವಿಷಯದಲ್ಲಿ ಕಸ ನಿರ್ವಹಣೆ ಸೇರಿದಂತೆ ಸ್ವಚ್ಛತೆ ಬಗ್ಗೆ ಚಿತ್ರಗಳನ್ನು ಬಿಡಿಸಿದರೆ, ಒಂಭತ್ತನೇ ತರಗತಿ ಮಕ್ಕಳು ಬರಗಾಲದ ಬವಣೆ ವಿಷಯದಲ್ಲಿ ಬರಗಾಲದ ಸಮಯದಲ್ಲಿ ನೀರಿಗಾಗಿ ಪರದಾಟ, ನೀರು ಸಂರಕ್ಷಣೆ, ಒಣ ಕೃಷಿ ಭೂಮಿ ಕುರಿತಾದ ಚಿತ್ರಗಳನ್ನು ಬಿಡಿಸಿದರು. ಹಾಗೆಯೇ, ಹತ್ತನೇ ತರಗತಿ ಮಕ್ಕಳು ಚಂದ್ರಯಾನ -3 ವಿಷಯದ ಮೇಲೆ ಚಂದ್ರನ ಮೇಲೆ ಭಾರತೀಯರ ಸಾಧನೆ, ಲ್ಯಾಂಡರ್‌-ರೋವರ್‌ ಗಳ ಚಿತ್ರಗಳನ್ನು ತಮ್ಮ ಕಲ್ಪನೆಯಲ್ಲಿ ಅದ್ಭುತವಾಗಿ ಚಿತ್ರಗಳಲ್ಲಿ ಮೂಡಿಸಿದರು.

ಮುಖದಲ್ಲಿ ನಗುವಿನ ಭಾವ

ಸ್ಪರ್ಧೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರೂ ಪ್ರತಿ ಮಗುವಿನ ಮುಖದಲ್ಲಿ ಸ್ಪರ್ಧೆಯಲ್ಲಿ ನನ್ನ ಚಿತ್ರಕ್ಕೆ ಬಹುಮಾನ ಬರಲಿದೆ ಎಂಬ ಆಶಾಭಾವನೆ ಎದ್ದುಕಾಣುತ್ತಿತ್ತು. ಒಂದೊಂದು ಶಾಲೆಯಿಂದ 20 ರಿಂದ 40 ಮಕ್ಕಳು ಭಾಗವಹಿಸಿದ್ದು, ಅದ್ಭುತ ಚಿತ್ರಗಳಿಗೆ ನಿರ್ಣಾಯಕರ ನಿರ್ಧಾರದಂತೆ ಬಹುಮಾನ ವಿತರಿಸಲಾಯಿತು. ಈ ಸ್ಪರ್ಧೆಯ ಇನ್ನೊಂದು ವಿಶೇಷ ಏನೆಂದರೆ, ಮಕ್ಕಳೊಂದಿಗೆ ಆಗಮಿಸಿದ್ದ ಶಿಕ್ಷಕರಿಗಾಗಿ ಲಕ್ಕಿ ಡ್ರಾ ಸಹ ಮಾಡಲಾಯಿತು. ಸುಮಾರು 15 ಶಿಕ್ಷಕರಿಗೆ ಚೀಟಿ ಎತ್ತುವ ಮೂಲಕ ಲಕ್ಕಿ ಡ್ರಾ ಹೆಸರಿನಲ್ಲಿ ಕೊಡುಗೆಗಳನ್ನು ವಿತರಿಸಲಾಯಿತು.

ಸಾಮರ್ಥ್ಯ ತೋರ್ಪಡಿಸಿ

ಸ್ಪರ್ಧೆಗೂ ಮುಂಚೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕಲೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಪ್ರತಿಯೊಂದು ವಿದ್ಯಾರ್ಥಿಗಳು ಕಲಿಕಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರೆ, ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತಂಡವು ಕಳೆದ 5 ವರ್ಷಗಳಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಿರುವುದು ಅಭಿನಂದನಾರ್ಹ ಎಂದು ಎಂದು ಹು-ಧಾ ಸೆಂಟ್ರಲ್‌ ಶಾಸಕ ಮಹೇಶ ಟೆಂಗಿನಕಾಯಿ ನುಡಿದರು.

ಇನ್ನು, ಸ್ವರ್ಣಾ ಗ್ರುಪ್‌ ಆಫ್‌ ಕಂಪನೀಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಎಚ್‌., ವಿ.ಎಸ್‌.ವಿ. ಪ್ರಸಾದ, ಮಕ್ಕಳ ಕಲಿಕೆಗೆ ಪೂರಕವಾಗುವ ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕನ್ನಡಪ್ರಭ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕನ್ನಡಪ್ರಭ ಸುವರ್ಣ ಸುದ್ದಿ ವಾಹಿನಿ ಪ್ರಧಾನ ಸಂಪಾದಕ ರವಿ ಹೆಗಡೆ, ಇಂದಿರಾ ಗಾಜಿನ ಮನೆ ಮಕ್ಕಳಿಗೆ ಮತ್ತಷ್ಟು ಸ್ಪೂರ್ತಿಯ ನೆಲೆಯಾಗಲಿ. ಐದು ವರ್ಷಗಳಿಂದ ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತಿದ್ದು, ತಂಡದ ಸ್ಫೂರ್ತಿ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.

ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶರಾವ್‌ ಹತ್ವಾರ್‌ (ಜೋಗಿ), ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಇದ್ದರು. ಹಾಗೆಯೇ, ಕಾರ್ಯಕ್ರಮದಲ್ಲಿ ಮಜೇಥಿಯಾ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಟ್ರ್ಯಾಕ್‌ ಆ್ಯಂಡ್‌ ಟ್ರೈಲ್‌ನ ಎಸ್‌.ಸಿ. ಹಿರೇಮಠ, ಟಿಐ ಸೈಕಲ್ಸ್‌ನ ಅಜಿತ್ ಚವ್ಹಾಣ, ಹಾಂಗ್ಯೋ ಐಸ್ಕ್ರಿಂನ ಶ್ರೀಧರ ಶೆಟ್ಟಿ, ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ನ ಉಮೇಶಕುಮಾರ ಸೇರಿದಂತೆ ಇತರರು ಇದ್ದರು. ಪ್ರೀತಿ ಸಿಲ್ಕ್ಸ್‌, ಎಲ್‌ಐಸಿ, ಜೆಂಸಿಪ್‌, ಕ್ಯಾಂಪ್ಕೋ ಪ್ರಮುಖ ಪ್ರಾಯೋಜಕತ್ವ ವಹಿಸಿದ್ದವು. ರವಿ ಕುಲಕರ್ಣಿ ನಿರೂಪಿಸಿದರು. ಕನ್ನಡಪ್ರಭ, ಏಷಿಯಾನೆಟ್‌ ಸುವರ್ಣ ನ್ಯೂಸ್‌ ವಿವಿಧ ವಿಭಾಗಗಳ ಸಂಪಾದಕೀಯ, ಜಾಹಿರಾತು, ಪ್ರಸರಣ ವಿಭಾಗದ ಸಿಬ್ಬಂದಿ ಇದ್ದರು.

ಚಿತ್ರಕಲೆ ಸ್ಪರ್ಧೆಗೆ ಅಂಕಿತಾ ಮೆರಗು

ಮಕ್ಕಳ ದಿನಾಚರಣೆ ಬರೀ ಚಿತ್ರಕಲಾ ಸ್ಪರ್ಧೆಗೆ ಸೀಮಿತವಾಗದೇ ಮಕ್ಕಳು ಅಂದು ಸಂತೋಷದಾಯಕವಾಗಿ ದಿನ ಕಳೆಯುವಂತೆ ಕನ್ನಡಪ್ರಭ ಪ್ರತಿ ವರ್ಷ ಓರ್ವ ಸಿನಿಮಾ ನಟಿಯನ್ನು ಕರೆಯಿಸಿ ಮಕ್ಕಳಿಗೆ ತುಸು ಮನರಂಜನೆ ನೀಡುವುದು ವಾಡಿಕೆಯಾಗಿದೆ. ಈ ಬಾರಿ ಚಿತ್ರಕಲೆ ಸ್ಪರ್ಧೆಯ ನಂತರ ಗಾಜಿನ ಮನೆಯ ವೇದಿಕೆಯಲ್ಲಿ ಖ್ಯಾತ ಸಿನಿ ತಾರೆ ಅಂಕಿತಾ ಅಮರ ಮಕ್ಕಳಿಗೆ ಮುದ ನೀಡುವ ಹಾಡು, ನೃತ್ಯ ಹಾಗೂ ಚಿತ್ರಕಲೆಯ ಬಗ್ಗೆ ಸುಮಾರು ಹೊತ್ತು ಭಾಷಣ ಸಹ ಮಾಡಿದರು.

ನಟಿ ಅಂಕಿತಾ ಹಾಡು, ನೃತ್ಯಕ್ಕೆ ಫಿದಾ ಆದ ಮಕ್ಕಳ ಕರತಾಡನ ಮುಗಿಲು ಮುಟ್ಟಿತು. ಪುನೀತ ರಾಜಕುಮಾರ ಅವರ ತನ್ಮಯನಾದೆನು ಹಾಡಿಗಂತೂ ಮಕ್ಕಳು ಚಪ್ಪಾಳೆ, ಶಿಳ್ಳೆಯ ಮಳೆಗೈದರು. ಶೇಖ್‌ ಇಟ್‌ ಪುಷ್ಪವತಿ ಹಾಡಿಗೆ ಅಂಕಿತಾ ಕುಣಿದಾಗ ಮಕ್ಕಳು ಪುಟಿದೆದ್ದು ಕುಣಿದರು. ಇದಕ್ಕೂ ಮುಂಚೆ ಮಕ್ಕಳಿಗೆ ಚಿತ್ರಕಲೆಯ ಪಾಠ ಮಾಡಿದರು. ಚಿತ್ರಕಲೆ ಎಲ್ಲರಿಗೂ ಒಲಿಯೋದಿಲ್ಲ. ಒಲಿದವರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇತ್ತೀಚೆಗೆ ಚಿತ್ರಕಲೆಯಲ್ಲಿ ಸಾಕಷ್ಟು ವಿಧಗಳು ಸೃಷ್ಟಿಯಾಗಿದ್ದು ತರಹೇವಾರಿ ಬಣ್ಣಗಳಲ್ಲಿ ಅದ್ಭುತವಾಗಿ ಚಿತ್ರಗಳನ್ನು ಬಿಡಿಸಬಹುದು. ಚಿತ್ರಕಲೆಯಿಂದಾಗಿ ಮಕ್ಕಳಿಗೆ ವಿಭಿನ್ನ ಭಾವನೆಗಳು ಹುಟ್ಟುವುದಲ್ಲದೇ ಜ್ಞಾನದ ಪರಿದಿ ಸಹ ಹೆಚ್ಚುತ್ತದೆ. ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಉತ್ತಮವಾಗಿ ಚಿತ್ರ ಬಿಡಿಸಿದರೆ ಬಹುಮಾನದ ಪ್ರೋತ್ಸಾಹವೂ ದೊರೆಯುತ್ತದೆ. ಮಕ್ಕಳು ಓದಿನ ಜೊತೆಗೆ ವಾರಕ್ಕೊಂದು ಚಿತ್ರ ಬಿಡಿಸುವ ರೂಢಿ ಮಾಡಿಕೊಳ್ಳಬೇಕು ಎಂದು ನಟಿ ಅಂಕಿತಾ ನುಡಿದರು.

ಸ್ಪರ್ಧಾ ವಿಜೇತರಿವರು

ಹೈಸ್ಕೂಲ್‌ನ 8, 9 ಮತ್ತು 10ನೇ ತರಗತಿಯಲ್ಲಿ ತಲಾ ನಾಲ್ಕು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಮೊದಲ ಬಹುಮಾನವಾಗಿ ತಲಾ ₹10 ಸಾವಿರ ಮೌಲ್ಯದ ಮೂರು ಸೈಕಲ್‌, ಪ್ರಮಾಣ ಪತ್ರ, ಸ್ಮರಣಿಕೆ ನೀಡಲಾಯಿತು. ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನವಾಗಿ ನಗದು, ಗಿಫ್ಟ್‌ ಹ್ಯಾಂಪರ್‌, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಲಾಯಿತು.

8ನೇ ತರಗತಿ ಪೈಕಿ ಹುಬ್ಬಳ್ಳಿಯ ಕಾನ್ವೆಂಟ್‌ ಶಾಲೆಯ ಸುಖದಾ ಮುರಗೋಡ ಪ್ರಥಮ, ಹುಬ್ಬಳ್ಳಿಯ ಆದರ್ಶನಗರದ ರೋಟರಿ ಪಬ್ಲಿಕ್‌ ಶಾಲೆಯ ಸಿಂಚನಾ ಆರ್‌. ಅರ್ಕಸಾಲಿ ದ್ವಿತೀಯ, ವಿದ್ಯಾನಿಕೇತನ ಆರ್‌.ಎನ್‌.ಎಸ್‌. ಶಾಲೆಯ ವಿಶಾಖಾ ಚಿಕ್ಕತುಂಬಳ ತೃತೀಯ ಹಾಗೂ ವಿ.ಎಸ್‌. ಪಿಳ್ಳೆ ಶಾಲೆಯ ಸಾನ್ವಿ ಯರಗೊಪ್ಪ ಸಮಾಧಾನಕರ ಬಹುಮಾನ ಸ್ವೀಕರಿಸಿದರು.

9ನೇ ತರಗತಿ ಪೈಕಿ ಮನೆಯಲ್ಲಿಯೇ ಶಿಕ್ಷಣ ಪಡೆಯುತ್ತಿರುವ ಧಾರವಾಡದ ರೀಚಾ ಪಾಂಡೆ ಪ್ರಥಮ, ಹುಬ್ಬಳ್ಳಿಯ ಜೆಎಸ್ಸೆಸ್‌ ಶಾಲೆಯ ಎನ್‌.ಡಿ. ಹೊಸಕೇರಿ ದ್ವಿತೀಯ ಜೆ.ಕೆ. ಶಾಲೆಯ ಅರ್ಚನಾ ಯಲ್ಲಟ್ಟಿ ತೃತೀಯ ಹಾಗೂ ಸುಳ್ಳ ಗ್ರಾಮದ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ ಭಾಗ್ಯ ಮಣಕವಾಡ ಸಮಾಧಾನಕರ ಬಹುಮಾನ ಪಡೆದರು.

ಇನ್ನು, 10ನೇ ತರಗತಿ ಪೈಕಿ ಹುಬ್ಬಳ್ಳಿಯ ನವನಗರ ರೋಟರಿ ಇಂಗ್ಲೀಷ್‌ ಮಾಧ್ಯಮ ಶಾಲೆಯ ಗಣರಾಜ ಕರಿಗಾರ ಪ್ರಥಮ, ಜೆ.ಕೆ. ಇಂಗ್ಲೀಷ್‌ ಮಾಧ್ಯಮ ಶಾಲೆಯ ಪೂಜಾ ಕಾಂಬಳೆ ದ್ವಿತೀಯ, ರೇಶ್ಮಿ ಆಲ್‌ ಮಿಲಾದ್‌ ಉರ್ದು, ಇಂಗ್ಲೀಷ ಮಾಧ್ಯಮ ಶಾಲೆಯ ಐವನ್ ನಾಯ್ಕರ್‌ ತೃತೀಯ ಹಾಗೂ ವಿಶ್ವಭಾರತಿ ಬಾಲಕಿಯರ ಶಾಲೆಯ ಅನನ್ಯ ಕಂಠಿಗಾವಿ ಸಮಾಧಾನಕರ ಬಹುಮಾನ ಪಡೆದರು.