ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆ: ಪಿ.ಎಂ. ನರೇಂದ್ರಸ್ವಾಮಿ

| Published : Nov 01 2025, 03:15 AM IST

ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆ: ಪಿ.ಎಂ. ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಡಳಿತ ಬಾಗಲಕೋಟೆ, ಜಿಲ್ಲಾಡಳಿತ ವಿಜಯಪುರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಾಗಲಕೋಟೆ ಹಾಗೂ ವಿಜಯಪುರ ಇವರ ಸಹಯೋಗದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನದಿಮೂಲಗಳು ಕಲುಷಿತಗೊಂಡಿದ್ದು, ನಿತ್ಯ ಹವಾಮಾನ ವೈಪರಿತ್ಯದ ಪರಿಣಾಮ ಒಂದು ಹಂತದಲ್ಲಿ ಪ್ರಕೃತಿ ವಿರುದ್ಧವೇ ಯುದ್ಧ ಮಾಡುತ್ತಿದ್ದೇವೆ ಎಂಬ ಆತಂಕ ಕಾಡುತ್ತಿದೆ. ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.

ಜಿಲ್ಲಾಡಳಿತ ಬಾಗಲಕೋಟೆ, ಜಿಲ್ಲಾಡಳಿತ ವಿಜಯಪುರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಾಗಲಕೋಟೆ ಹಾಗೂ ವಿಜಯಪುರ ಇವರ ಸಹಯೋಗದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನದಿ ನೀರು ಕುಡಿಯಲು ಯೋಗ್ಯವಲ್ಲವಾಗಿದೆ. ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಕಲುಷಿತವಾಗುತ್ತಿದೆ. ಆಸ್ಪತ್ರೆ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗುತ್ತಿಲ್ಲ. ಪ್ಲಾಸ್ಪಿಕ್ ಬಳಕೆಯಿಂದ ನೀರು, ಭೂಮಿ ಹಾಗೂ ಅರಣ್ಯ ವಿನಾಶದತ್ತ ಸಾಗುತ್ತಿದೆ. ಹೀಗಾದರೆ ಭವಿಷ್ಯದ ಬದುಕು ಎತ್ತ ಸಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ನರೇಂದ್ರಸ್ವಾಮಿ, ಇದಕ್ಕೆಲ್ಲ ಪರಿಹಾರ ಮನೆಯಿಂದಲೇ ತ್ಯಾಜ್ಯದ ಮರುಬಳಕೆ ಬಗ್ಗೆ ಚಿಂತನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕೆರೆ ಕಟ್ಟೆಗಳಲ್ಲಿ ದನಕರುಗಳು ನೀರು ಕುಡಿಯದ ಸ್ಥಿತಿ ನಿರ್ಮಾಣವಾಗಿದೆ. ವಾಯುಮಾಲಿನ್ಯ ಮೀತಿಮೀರಿದೆ. ನಾವು ಜವಾಬ್ದಾರಿಯಿಂದ ಬದುಕು ನಡೆಸುವುದನ್ನು ಮರೆತಿದ್ದೇವೆ. ಕೊರೊನಾ ವೇಳೆ ಎಲ್ಲರಿಗೂ ಆಮ್ಲಜನಕ ಸಾಲದೇ ಹೋಗಿತ್ತು. ಅಂದರೆ ನಾವು ಭಾರೀ ಪ್ರಮಾಣದಲ್ಲಿ ಪರಿಸರ ನಾಶ ಮಾಡಿದ್ದೇವೆ ಎಂಬುವುದರ ಅರಿವು ನಮಗೆ ಆಗಬೇಕಿದೆ ಎಂದು ಹೇಳಿದರು.

ಅವಳಿ ಜಿಲ್ಲೆಗಳಲ್ಲಿ ವಾಯವ್ಯ ಗುಣಮಟ್ಟ ಅಳತೆ ಕೇಂದ್ರ:

ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಐದು ನದಿಗಳು ಹರಿಯುತ್ತಿದ್ದು, ನದಿಗಳ ಸ್ಥಿತಿ ಗಂಭೀರವಾಗಿದೆ. ಎರಡು ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆ ಸೇರಿ ಇತರೆ ಉಪ ಉತ್ಪನ್ನಗಳು ಬರುತ್ತಿವೆ. ತ್ಯಾಜ್ಯದ ವಿಷ ನೇರವಾಗಿ ಜೀವರಾಶಿಗೆ ತಲುಪುತ್ತಿದೆ. ಹೀಗಾಗಿ ಹೊಸ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಇತರೆ ಪರೀಕ್ಷೆಗಳಿಗಾಗಿ ಅವಳಿ ಜಿಲ್ಲೆಯಲ್ಲಿ ತಲಾ ಒಂದು ವಾಯುಗುಣಮಟ್ಟ ಅಳತೆ ಕೇಂದ್ರ ಸ್ಥಾಪನೆ ಮಾಡುವುದಾಗಿ ನರೇಂದ್ರಸ್ವಾಮಿ ತಿಳಿಸಿದರು.

ಉತ್ತಮದ ಪರಿಸರ ನಿರ್ಮಾಣಕ್ಕೆ ಮಾಲಿನ್ಯದ ವಿರುದ್ಧದ ಚಟುವಟಿಕೆ ಕಡಿಮೆ ಮಾಡಲು ಸಲಹೆ ನೀಡಿದ ಅವರು, ಇಂಧನ ಬಳಕೆ ಕಡಿಮೆಯಾಗಲಿ ಸೈಕಲ್ ಬಳಕೆ ಹೆಚ್ಚಾಗಬೇಕು. ನಾವು ಜವಾಬ್ದಾರಿ ತಿಳಿಸುತ್ತಿಲ್ಲ. ಬದಲಾಗಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳಿ ಎಂದು ತಿಳಿಸಿದರು. ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ನದಿ, ಬೋರ್‌ವೆಲ್‌ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಾರ್ಖಾನೆಗಳ ತ್ಯಾಜ್ಯದಿಂದ ಪರಿಸರ ಕಲುಷಿತವಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಪರಿಸರವಾದಿ ಡಾ.ಎಂ.ಆರ್. ದೇಸಾಯಿ ಅವರು ಮಾತನಾಡಿದರು.

ಪರಿಸರ ರಕ್ಷಣೆಗೆ ಮುಂದಾಗಿರುವ ಎರಡು ಜಿಲ್ಲೆಯ ಪೌರಕಾರ್ಮಿಕರನ್ನು ಸಹ ಸನ್ಮಾನಿಸಲಾಯಿತು. ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಎಸ್.ಲಿಂಗರಾಜು, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಅನುಕುಮಾರ ಚಳಗೇರಿ, ವಿಜಯಪುರ ಪರಿಸರ ಅಧಿಕಾರಿ ವಿವೇಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇಂದಿರಾ ಪ್ರೀಯದರ್ಶಿನಿ ಪ್ರಶಸ್ತಿ ಪ್ರದಾನ:

ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಗೆ ಅಮೂಲ್ಯವದ ಕೊಡುಗೆ ನೀಡಿರುವ ಬಾಗಲಕೋಟೆ ಜಿಲ್ಲೆಯ ಶಿಕ್ಷಕ ಪಿ.ಡಿ.ವಾಲಿಕಾರ, ನಾಗರಳಾ ಎಸ್.ಸಿ. ಗೌರಿ ಶಂಕರ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣಾಭಿವೃದ್ದಿ ಸಂಘದ ಅಧ್ಯಕ್ಷ ಪವಿತ್ರಾ ದ್ಯಾವಪ್ಪ ಜಕ್ಕನ್ನವರ, ಶಿವರಡ್ಡಿ ಹನಮರಡ್ಡಿ ವಾಸನ, ವಿಜಯಪುರ ಜಿಲ್ಲೆಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಕಮಿಟಿ, ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಶಿವಾನಂದ ಕಟ್ಟಿಮನಿ, ನಾನಾ ಸಾಹೇಬ ದ್ಯಾಮನಗೌಡ ಪಾಟೀಲ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.----

ತೋಟಗಾರಿಕೆ ವಿಶ್ವವಿದ್ಯಾಲಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರ ಜೆ.ಟಿ. ಪಾಟೀಲ ಇಲ್ಲಿರುವವರು ಲ್ಯಾಬ್‌ನಿಂದ ಲ್ಯಾಂಡಿಗೆ ಬರಲು ಆಗುತ್ತಿಲ್ಲ. ಪ್ರಯೋಗಗಳು ಪ್ರಯೋಗಾಲಯದ ಬದಲು ಭೂಮಿಯಲ್ಲಿ ಆಗಬೇಕು. ಅಂದಾಗ ರೈತರಿಗೆ ನೆರವಾಗುತ್ತದೆ. ಈ ವಿಷಯದಲ್ಲಿ ವಿವಿ ಮತ್ತಷ್ಟ ಕ್ರಿಯಾಶೀಲವಾಗಬೇಕು.

- ಪಿ.ಎಂ.ನರೇಂದ್ರಸ್ವಾಮಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ