ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ

| Published : Nov 15 2025, 02:30 AM IST

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪ್ರತಿ ಶಾಲೆಗಳಲ್ಲೂ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಹರಪನಹಳ್ಳಿ: ತಾಲೂಕಿನ ಪ್ರತಿ ಶಾಲೆಗಳಲ್ಲೂ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರು ಕುಣಿದು ಕುಪ್ಪಳಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ಮಕ್ಕಳ ವೈಭವದ ಜೊತೆಗೆ ಪ್ರೇರಣಾ ದತ್ತಿ ನಿಧಿಗೆ ಪೋಷಕರಿಂದ ಸಾಕಷ್ಟು ಬೆಂಬಲ ದೊರಕಿತು. ಶಾಲೆಯ ಅಭಿವೃದ್ಧಿಗೆ ಮೀಸಲಿಟ್ಟಿರುವ ಪ್ರೇರಣಾ ದತ್ತಿ ನಿಧಿಗೆ ಪೋಷಕರಿಂದ ₹3 ಲಕ್ಷ ಧನಸಹಾಯ ಸಿಕ್ಕಿದ್ದರಿಂದ ದೇಣಿಗೆ ನೀಡಿದ ಪೋಷಕ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಎಚ್.ಕೆ. ಚಂದ್ರಪ್ಪ ಶಾಲೆಯ ಪ್ರಗತಿಗೆ ಸಾಕಷ್ಟು ಶ್ರಮಿಸಿರುವುದು ಅನಾವರಣಗೊಂಡಿತು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳಲ್ಲಿ ಕಲಿಕಾ ಸಾಧನೆ ಕುರಿತು ಪೋಷಕರಿಗೆ ತಿಳಿವಳಿಕೆ, ಕ್ರೀಡಾ ಸಾಧನೆ, ಕಲಿಕಾ ಪ್ರಾತ್ಯಕ್ಷಿಕೆ, ಮಕ್ಕಳ ಹಕ್ಕುಗಳ ಬಗ್ಗೆ, ಪೋಕ್ಸೋ, ಮಕ್ಕಳ ಸುರಕ್ಷತೆ ಬಗ್ಗೆ, ಪ್ರತಿಭಾ ಕಾರಂಜಿ ಕುರಿತು ಪೋಷಕರನ್ನು ಶಾಲೆಗೆ ಆಹ್ವಾನಿಸಿ ಅರಿವು ಮೂಡಿಸಲಾಯಿತು.

ಶಾಮಿಯಾನ ಹಾಕಿಸಿ ಪೋಷಕರಿಗೆ ಸಮರ್ಪಕವಾದ ಆಸನ ವ್ಯವಸ್ಥೆ, ರುಚಿಕರವಾದ ಊಟದ ವ್ಯವಸ್ಥೆ ಮಾಡಿದ್ದು, ಪೋಷಕರು ಸಹ ತಮ್ಮ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಸಂತಸ ಪಟ್ಟರು. ವಿವಿಧ ನೃತ್ಯ, ಹಾಡುಗಾರಿಕೆ, ಸಾಂಸ್ಕೃತಿಕ ಸ್ಪರ್ದೆಗಳು ಎಲ್ಲರ ಗಮನ ಸೆಳೆದವು.

ಮೇಗಳಪೇಟೆ, ಆದರ್ಶ, ಬಾಲಕಿಯರ ಶಾಲೆ, ಕುರುಬರಗೇರಿ, ಉಪ್ಪಾರಗೇರಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಸಹ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಶಿಕ್ಷಕರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು. ಪೋಷಕರು ಸಹ ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುರಿತು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಬಿಇಒ ಲೇಪಾಕ್ಷಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಹೊನ್ನತ್ತೆಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ, ಶಿಕ್ಷಣ ಸಂಯೋಜಕರಾದ ಲಥಾ ರಾಥೋಡ, ಪಂಪ ನಾಯ್ಕ, ವೀರೇಶ, ಲಕ್ಷ್ಮೀ ರಂಗಣ್ಣನವರ್ ಹಾಗೂ ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿ ಮಕ್ಕಳ ಹಾಗೂ ಪೋಷಕರ ಜೊತೆ ಬೆರೆತು ಶೈಕ್ಷಣಿಕ ಅಭಿವೃದ್ಧಿಗೆ ಮುನ್ನುಡಿ ಬರೆದರು. ಖಾಸಗಿ ಶಾಲೆಗಳಲ್ಲೂ ಹಬ್ಬದ ವಾತಾವರಣ ಕಂಡು ಬಂತು.