ಯುದ್ಧಗಳು, ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ಚಂಡಮಾರುತ, ಪ್ರವಾಹ ಮತ್ತು ಹವಾಮಾನ ವೈಪರೀತ್ಯಗಳು ಮಾನವೀಯತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ. ಪರಿಸರದ ಮೇಲಿನ ಈ ರೀತಿಯ ದಾಳಿಗಳು ಮುಂದುವರಿದರೆ, ಮುಂದಿನ 30 ವರ್ಷಗಳಲ್ಲಿ ಜಾಗತಿಕ ಜನಸಂಖ್ಯೆಯ ಸುಮಾರು ಶೇ. 50ರಷ್ಟು ಜನರು ತಾವಿದ್ದ ಪ್ರದೇಶದಿಂದ ಬೇರೆಡೆ ಸ್ಥಳಾಂತರಗೊಳ್ಳಬಹುದು ಎಂದು ಪ್ರಶಾಂತ್ ಭೂಷಣ್ ಎಚ್ಚರಿಸಿದರು.
ಧಾರವಾಡ:
ನಿರಂತರ ಪರಿಸರ ನಾಶದಿಂದಾಗಿ ಭಾರತ ಸೇರಿದಂತೆ ಇಡೀ ಜಗತ್ತು ಬಿಕ್ಕಟ್ಟು ಎದುರಿಸಲಿದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಎಚ್ಚರಿಸಿದ್ದಾರೆ.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಮಾಜ ಪರಿವರ್ತನ ಸಮುದಾಯ ದತ್ತಿ ಉಪನ್ಯಾಸ ಉದ್ಘಾಟನೆ ಮತ್ತು ಎಸ್.ಆರ್. ಹಿರೇಮಠ ಮಹಾಸಂಗ್ರಾಮಿ ಪ್ರಶಸ್ತಿ ಸ್ವೀಕರಿಸಿದ ಅವರು, ಯುದ್ಧಗಳು, ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ಚಂಡಮಾರುತ, ಪ್ರವಾಹ ಮತ್ತು ಹವಾಮಾನ ವೈಪರೀತ್ಯಗಳು ಮಾನವೀಯತೆಗೆ ಗಂಭೀರ ಅಪಾಯವನ್ನು ಉಂಟು ಮಾಡುತ್ತಿವೆ. ಪರಿಸರದ ಮೇಲಿನ ಈ ರೀತಿಯ ದಾಳಿಗಳು ಮುಂದುವರಿದರೆ, ಮುಂದಿನ 30 ವರ್ಷಗಳಲ್ಲಿ ಜಾಗತಿಕ ಜನಸಂಖ್ಯೆಯ ಸುಮಾರು ಶೇ. 50ರಷ್ಟು ಜನರು ತಾವಿದ್ದ ಪ್ರದೇಶದಿಂದ ಬೇರೆಡೆ ಸ್ಥಳಾಂತರಗೊಳ್ಳಬಹುದು ಎಂದರು.
ಸಾಮಾಜಿಕ ಬಿಕ್ಕಟ್ಟು:ಸಾಮಾಜಿಕ ಮಾಧ್ಯಮಗಳ ಅನಿಯಂತ್ರಿತ ಪ್ರಭಾವದಿಂದ ಈ ಬಿಕ್ಕಟ್ಟು ಇನ್ನಷ್ಟು ಜಟಿಲವಾಗಿದೆ ಎಂದ ಅವರು, ದ್ವೇಷ ಭಾಷಣ, ನಕಲಿ ಸುದ್ದಿ ಮತ್ತು ಸುಳ್ಳು ನಿರೂಪಣೆಗಳ ಹರಡುವಿಕೆ, ಅಲ್ಪಸಂಖ್ಯಾತರ ಮೇಲಿನ ದಾಳಿ, ವೈಜ್ಞಾನಿಕ ಮನೋಭಾವ ಇಲ್ಲದಿರುವುದು ಸಾಮಾಜಿಕ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಅವೈಜ್ಞಾನಿಕ ವಿಷಯವು ಪಠ್ಯಪುಸ್ತಕಗಳಿಗೆ ಪ್ರವೇಶಿಸುತ್ತಿದೆ ಮತ್ತು ಅಧಿಕಾರದಲ್ಲಿರುವ ಜನರನ್ನು ಟೀಕಿಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ. ಗುಂಪು ಹಲ್ಲೆ ನಿರಂತರವಾಗಿ ಮುಂದುವರಿದಿದೆ. ಭಾರತದ ಚುನಾವಣಾ ಆಯೋಗ ಸೇರಿದಂತೆ ಸಂಸ್ಥೆಗಳ ಮೇಲೆ ನೇರ ದಾಳಿ ನಡೆಯುತ್ತಿದೆ ಎಂದು ಭೂಷಣ ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಸರ್ಕಾರಿದ ಗಿಣಿ:ಚುನಾವಣಾ ಆಯೋಗವು ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ. ಅದು "ಸರ್ಕಾರಿ ಗಿಣಿ "ಯಂತೆ ಕೆಲಸ ಮಾಡುತ್ತಿದೆ. ಮಾದರಿ ನೀತಿ ಸಂಹಿತೆಯನ್ನು ವಿರೋಧ ಪಕ್ಷಗಳ ವಿರುದ್ಧ ಆಯುಧವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದ ಪ್ರಶಾಂತ ಭೂಷಣ್, ಬಿಹಾರದಲ್ಲಿ ಚುನಾವಣೆಗಳು ಘೋಷಣೆಯಾದ ನಂತರ, ₹ 10,000 ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು. ಆದರೆ ಚುನಾವಣಾ ಆಯೋಗವು ಮೂಕ ಪ್ರೇಕ್ಷಕರಾಗಿ ಉಳಿದಿದೆ ಎಂದರು.
ಕೇಂದ್ರ ಕಾನೂನು ಸಚಿವಾಲಯದ ಕಾರ್ಯವೈಖರಿಗೆ ಭೂಷಣ್ ಆಕ್ಷೇಪ ವ್ಯಕ್ತಪಡಿಸಿ, ಸ್ವತಂತ್ರ ನ್ಯಾಯಾಧೀಶರ ನೇಮಕಕ್ಕಾಗಿ ಕೊಲಿಜಿಯಂನ ಶಿಫಾರಸುಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಕೇಂದ್ರವು ಹೊಸ ಕಾನೂನುಗಳ ಮೂಲಕ ಪ್ರತಿಭಟನೆ ಮಾಡುವ ಹಕ್ಕನ್ನು ಮೊಟಕುಗೊಳಿಸಿದೆ. ಶಾಂತಿಯುತ ಸಭೆ ಸೇರುವ ಮತ್ತು ಪ್ರತಿಭಟಿಸುವ ಹಕ್ಕನ್ನು ನಿರ್ಬಂಧಿಸಿದೆ. 100ಕ್ಕೂ ಹೆಚ್ಚು ಜನರನ್ನು ಒಳಗೊಂಡ ಯಾವುದೇ ಪ್ರತಿಭಟನೆ ಸರ್ಕಾರದ ಅನುಮತಿಯಿಲ್ಲದೆ ನಡೆಸಲಾಗುವುದಿಲ್ಲ ಎನ್ನುವುದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು.ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರವೇ ವ್ಯವಸ್ಥೆಯ ಕಠೋರ ವಾಸ್ತವಗಳಿಗೆ ತಾನು ಒಡ್ಡಿಕೊಂಡಿದ್ದೇನೆ. ನಾವು ಶ್ರೀಮಂತರು ಮತ್ತು ಪ್ರಭಾವಶಾಲಿಗಳಿಗೆ ಒಲವು ತೋರುವ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಪ್ರಾಮಾಣಿಕತೆಗೆ ಕಡಿಮೆ ಸ್ಥಳವಿದೆ. ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ದುರಾಸೆಯೇ ಮೂಲ ಕಾರಣ. ಈಗಿನ ಅಗತ್ಯವೆಂದರೆ ಮಾನವ ಮತ್ತು ನೈತಿಕ ಮೌಲ್ಯಗಳನ್ನು ಆಧರಿಸಿದ ಸಾಮಾಜಿಕ ಪರಿವರ್ತನೆ ಎಂದರು.
ರಾಜ್ಯ ಕಾನೂನು ವಿವಿ ಕುಲಪತಿ ಸಿ. ಬಸವರಾಜು, ಸಮಾಜಕ್ಕೆ ಸವಾಲುಗಳಿಗೆ ಸ್ಪಂದಿಸುವ ಮತ್ತು ಸಕಾರಾತ್ಮಕ ಬದಲಾವಣೆ ತರಬಲ್ಲ ವ್ಯಕ್ತಿಗಳು ಬೇಕು. ಹೆಚ್ಚುತ್ತಿರುವ ಜಾತಿ ಆಧಾರಿತ ವಿಭಜನೆಗಳು, ಮಾನವ ಹಕ್ಕುಗಳ ಉಲ್ಲಂಘನೆ, ವ್ಯಾಪಕ ಭ್ರಷ್ಟಾಚಾರ ಮತ್ತು ಅಸ್ಪೃಶ್ಯತೆಯ ನಿರಂತರತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಹೋರಾಟಗಾರ ಎಸ್.ಆರ್. ಹಿರೇಮಠ, ಕಾರ್ಯಾಧ್ಯಕ್ಷ ಬಸವ ಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ ಇದ್ದರು.