ಎರಡೂವರೆ ವರ್ಷದ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ರೈತರ ಸಮಸ್ಯೆಗಳಿಗೆ, ಬಡಜನರ ಸಂಕಷ್ಟಗಳಿಗೆ ಸ್ಪಂದನೆ ನೀಡುವ ಯೋಗ್ಯತೆ ಕೂಡ ಕಾಂಗ್ರೆಸ್ ಸರ್ಕಾರಕ್ಕಿಲ್ಲ.

ಕಲಘಟಗಿ:

ಜನರ ಸಂಕಷ್ಟಗಳನ್ನು ಕೇಳುವ ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಪಟ್ಟಣದಲ್ಲಿ ಸಂಸದ ಕ್ರೀಡಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎರಡೂವರೆ ವರ್ಷದ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ರೈತರ ಸಮಸ್ಯೆಗಳಿಗೆ, ಬಡಜನರ ಸಂಕಷ್ಟಗಳಿಗೆ ಸ್ಪಂದನೆ ನೀಡುವ ಯೋಗ್ಯತೆ ಕೂಡ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರಕ್ಕೆ ಅವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಆಡಳಿತ ಪಕ್ಷದ ಶಾಸಕರಾದ ರಾಜು ಕಾಗೆ ಹಾಗೂ ಆರ್.ವಿ. ದೇಶಪಾಂಡೆ ಅವರೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ರಾಜ್ಯದ ಜನ ಮೊದ ಮೊದಲು ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿದಿದ್ದರು. ಆದರೆ, ಇದೀಗ ಜನರು ಅವರನ್ನು ಅಸಮರ್ಥ ಮುಖ್ಯಮಂತ್ರಿ ಎಂದು ಟೀಕಿಸುತ್ತಿದ್ದಾರೆ. ನಾಡಿನ ಜನರ ಪಾಲಿಗೆ ಈ ಸರ್ಕಾರ ಬದುಕಿದ್ದು ಕೂಡ ಸತ್ತಂತೆ ಎಂದು ಟೀಕಿಸಿದರು.

ಒಂದೆಡೆ ಹಿಂದೂ ಕಾರ್ಯಕರ್ತರ ಹತ್ಯೆಗಳು, ಮತ್ತೊಂದೆಡೆ ಲವ್ ಜಿಹಾದ್ ಪ್ರಕರಣಗಳು ಪುನರಾವರ್ತನೆಯಾಗುತ್ತಿವೆ. ಯಲ್ಲಾಪುರದಲ್ಲಿ ದಲಿತ ಯುವತಿಯ ಹತ್ಯೆ ಆಗಿದೆ. ಇವುಗಳನ್ನೆಲ್ಲ ನೋಡಿ ಗೃಹ ಸಚಿವರು ಅಸಮರ್ಥರು ಎಂದು ರಾಜ್ಯದ ಜನ ಮಾತನಾಡುತ್ತಿದ್ದಾರೆ ಎಂದರು.ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್‌ ಶಾಸಕ ಭರತ್ ರೆಡ್ಡಿ ಅವರ ಖಾಸಗಿ ಗನ್ ಮ್ಯಾನ್‌ ಗುಂಡು ಹಾರಿಸಿದ ಪರಿಣಾಮ ಅವರ ಪಕ್ಷದ ಕಾರ್ಯಕರ್ತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ?. ಯಾರು ಕಾನೂನು ಸುವ್ಯವಸ್ಥೆ ಹಾಳು ಮಾಡಿ ಗೂಂಡಾಗಿರಿ ಮಾಡಿದ್ದಾರೆ ಅವರನ್ನು ಬಂಧಿಸಿ ಸರಿಯಾಗಿ ತನಿಖೆ ಮಾಡಬೇಕು.

ಬಿ.ವೈ. ವಿಜಯೇಂದ್ರ, ರಾಜ್ಯಾಧ್ಯಕ್ಷ, ಬಿಜೆಪಿ