ರಾಮನಗರ: ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದೇ ನನ್ನ ಮೊದಲ ಆದ್ಯತೆ ಆಗಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು
ರಾಮನಗರ: ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದೇ ನನ್ನ ಮೊದಲ ಆದ್ಯತೆ ಆಗಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಮೇಲ್ಚಾವಣಿ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಜನಪ್ರತಿನಿಧಿಗಳು, ಸಮಾಜ ಮತ್ತು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾದರೆ ದೇಶ, ರಾಜ್ಯ, ತಾಲ್ಲೂಕುಗಳು ಉದ್ಧಾರವಾಗುತ್ತದೆ. ವಿದ್ಯಾರ್ಥಿಗಳು ಭಾರತ್ ಜೋಡೋಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸದಸ್ಯರಾದರೆ 50 ರಿಂದ 150 ಜನರಿರುವ ಒಂದು ಸಂಘಕ್ಕೆ ಅಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಇರುವ ಸಂಘಕ್ಕೆ ಪ್ರತಿ ವರ್ಷಕ್ಕೆ ಸರ್ಕಾರ 10 ಲಕ್ಷ ರು. ಅನುದಾನ ಸಿಗಲಿದೆ ಎಂದು ಹೇಳಿದರು.
15-20 ವರ್ಷ ವಯೋಮಾನದೊಳಗಿನ ವಿದ್ಯಾರ್ಥಿಗಳ ಕ್ರೀಡೆಯಲ್ಲಿ ತಮ್ಮ ಪ್ರತಿಭೆಗಳನ್ನು ಹೊರ ಹಾಕಲು ಮತ್ತು ನಿಮ್ಮ ವಾರ್ಡು, ಗ್ರಾಮದ ಅಭಿವೃದ್ಧಿಗೆ ಇದನ್ನು ಬಳಸಿಕೊಂಡು ಉತ್ತಮ ನಾಯಕತ್ವವನ್ನು ರೂಢಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.ನಗರದ ಸರ್ಕಾರಿ ಬಾಲಕೀಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬಿಸಿಲಿನ ಕಾರಣದಿಂದ ಪ್ರತಿವರ್ಷ ಸಭೆ, ಸಮಾರಂಭಗಳಿಗೆ ಆಗುತ್ತಿದ್ದ ತೊಂದರೆ ತಪ್ಪಿಸಿ ಸುಮಾರು 25 ಲಕ್ಷ ರು.ಗಳ ವೆಚ್ಚದಲ್ಲಿ ನೆರಳು ಉಂಟು ಮಾಡುವ ಮೇಲ್ಚಾವಣಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ತೆರೆದ ಪ್ರಾಂಗಣದಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಕಾಲೇಜಿನ ಪ್ರಾಂಗಣಕ್ಕೆ ನೆರಳು ನೀಡುವ ಉದ್ದೇಶದಿಂದ 10ಲಕ್ಷ ಅನುದಾನ ನೀಡಿದ್ದಾರೆ. ಆದರೆ ಜಾಗದ ವಿಸ್ತೀರ್ಣ ಮತ್ತಷ್ಟು ಹೆಚ್ಚಿನ ಅಳತೆ ಇರುವುದರಿಂದ ಅನುದಾನದ ಹಣದ ಜೊತೆಗೆ ಇನ್ನು 15 ಲಕ್ಷಗಳನ್ನು ಶಾಸಕರ ಅನುದಾನ ನೀಡಬೇಕೆಂದು ತಿಳಿಸಿದ್ದಾರೆ.ಅದರಂತೆ ನಾನು ಕೊಡಲು ಒಪ್ಪಿಗೆ ನೀಡಿದ್ದೇನೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಸಾವಿರದ ಹತ್ತಿರ ಇರುವುದರಿಂದ ಮೇಲ್ಚಾವಣಿಯನ್ನು 15 ಅಡಿ ಎತ್ತರವನ್ನು ಹೊಂದಿದ್ದು ಒಳಗೆ ಫ್ಯಾನ್‌ಗಳನ್ನು ಅಳವಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಕೆಲವು ವಿಷಯಗಳ ಉಪನ್ಯಾಸಕರ ಕೊರತೆ ಇದೆ ಎಂದು ಕಾಲೇಜು ಸಮಿತಿಯವರು ಮತ್ತು ಉಪನ್ಯಾಸಕರು ಶಾಸಕರ ಗಮನಕ್ಕೆ ತಂದರು. ನಂತರ ಶಾಸಕ ಇಕ್ಬಾಲ್ ಹುಸೇನ್ ಕಾಲೇಜಿನ ಪ್ರಯೋಗಾಲಯ, ಗ್ರಂಥಾಲಯ ಶಾಲಾ ಕೊಠಡಿ ವೀಕ್ಷಣೆ ನಡೆಸಿ ವಿದ್ಯಾರ್ಥಿಗಳಿಂದ ಪಾಠ ಪ್ರವಚನಗಳ ಬಗ್ಗೆ ತಿಳಿದುಕೊಂಡರು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಕಾಲೇಜು ಸಮಿತಿ ಉಪಾಧ್ಯಕ್ಷ ಭೈರೇಗೌಡ, ಮುಖಂಡರಾದ ಗುರುಪ್ರಸಾದ್, ರವಿ, ಗಿರಿಜಮ್ಮ, ಕುಂಭಾಪುರ ಕಾಲೋನಿ ಕೃಷ್ಣಪ್ಪ, ಗುತ್ತಿಗೆದಾರರಾದ ಸುಂದರ್, ಭೈರೇಗೌಡ, ಪ್ರಾಂಶುಪಾಲ ಕೆ. ಅನ್ಸರ್ ಉಲ್ ಹಕ್, ಉಪನ್ಯಾಸಕರಾದ ಚಿತ್ರಾ ಶೆಣೈ, ವಿಜಯ್, ಡಾ. ನರಸಿಂಹಸ್ವಾಮಿ, ಕೆ. ನಾಗೇಶ್, ಬಸವರಾಜು ಹಾಜರಿದ್ದರು.
-----------------------------4ಕೆಆರ್ ಎಂಎನ್ 6.ಜೆಪಿಜಿ
ರಾಮನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಮೇಲ್ಚಾವಣಿ ಕಾಮಗಾರಿಗೆ ಶಾಸಕ ಇಕ್ಬಾಲ್ಹುಸೇನ್ ರವರು ಭೂಮಿ ಪೂಜೆ ನೆರವೇರಿಸಿದರು.
---------------------------