ರಾಜ್ಯದಲ್ಲಿ ಹಿಂದೆಂದೂ ಕಾಣದ ದುಸ್ಥಿತಿ ನಿರ್ಮಾಣ

| Published : May 20 2025, 01:49 AM IST

ಸಾರಾಂಶ

ಕಾಂಗ್ರೆಸ್ ಆಡಳಿತ ಕನ್ನಡಿಗರ ಬದುಕಿಗೆ ಶಾಪವಾಗಿದೆ. ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣಪತ್ರದವರೆಗೂ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ. ಇದು ಆಡಳಿತ ನಡೆಸುವ ಸರ್ಕಾರವಲ್ಲ, ಕೇವಲ ವಸೂಲಿ ಸರ್ಕಾರ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ರಾಜ್ಯ ಸರ್ಕಾರ ವಿರುದ್ದ ಹರಿಹಾಯ್ದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ಕನ್ನಡಿಗರ ಬದುಕಿಗೆ ಶಾಪವಾಗಿದೆ. ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣಪತ್ರದವರೆಗೂ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಎಂದರೆ ಭ್ರಷ್ಟಾಚಾರದ ಕೂಪ. ಇದು ಸ್ಪಷ್ಟವಾಗಿ ಕಮಿಷನ್ ಸರ್ಕಾರ, 60% ಸರ್ಕಾರ, ಪ್ರತಿಯೊಂದು ಯೋಜನೆಯಲ್ಲೂ, ಪ್ರತಿ ಟೆಂಡರ್‌ನಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರದ ಕಿಂಗ್‌ಪಿನ್‌ಗಳು, ವಾಲ್ಮೀಕಿ ನಿಗಮದ ₹187 ಕೋಟಿ ಹಣ ದುರುಪಯೋಗ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮಾಡಿದ ಘೋರ ವಂಚನೆ. ಕಾರ್ಮಿಕ ಮಕ್ಕಳ ಪೌಷ್ಟಿಕಾಂಶ ಕಿಟ್‌ಗಳ ಖರೀದಿಯಲ್ಲಿ ₹75 ಕೋಟಿ ಬಾರಿ ಹಗರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರೋಧಿ ನೀತಿಗಳು ಮತ್ತು ಮುಸ್ಲಿಮ ತುಷ್ಟೀಕರಣ ಈ ಸರ್ಕಾರ ಸಂವಿಧಾನದ ಆಶಯಗಳಿಗೆ ದ್ರೋಹ ಬಗೆಯುತ್ತಿದೆ. ಉಪಮುಖ್ಯಮಂತ್ರಿಗಳೇ ಬಹಿರಂಗವಾಗಿ ಸಂವಿಧಾನ ಬದಲಾಗಲಿದೆ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗಾಗಿ ಸಂವಿಧಾನವನ್ನೇ ಅಪಮಾನಿಸಿದ್ದಾರೆ ಎಂದರು.

ವಿಧಾನಸೌಧದಂತಹ ಪವಿತ್ರ ಸ್ಥಳದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂಬ ದೇಶದ್ರೋಹಿ ಘೋಷಣೆಗಳು ಕೇಳಿಬಂದರೂ, ಸರ್ಕಾರ ಅದನ್ನು ಮರೆಮಾಚಲು ಪ್ರಯತ್ನಿಸುವ ಮೂಲಕ ರಾಷ್ಟ್ರ ವಿರೋಧಿಗಳಿಗೆ ಬೆಂಬಲ ನೀಡುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ, ಜೈನಮುನಿ ಹತ್ಯೆ, ನೇಹಾ ಹಿರೇಮಠ ಕೊಲೆ ಸೇರಿದಂತೆ ಕೊಲೆ, ಸುಲಿಗೆ, ಅತ್ಯಾಚಾರಗಳು ಮಿತಿಮೀರಿವೆ. ಲವ್ ಜಿಹಾದ್ ಹಾವಳಿ ಹೆಚ್ಚಾಗಿದೆ. ಡ್ರಗ್ಸ್ ಮಾಫಿಯಾ ಮತ್ತೆ ಸಕ್ರಿಯವಾಗಿದೆ. ನಿಷೇಧಿತ ಸಂಘಟನೆಗಳ ಚಟುವಟಿಕೆಗಳು ಮತ್ತೆ ಶುರುವಾಗಿವೆ. ಪೊಲೀಸರ ಮೇಲೆಯೇ ಮಾಫಿಯಾಗಳು ಹಲ್ಲೆ ನಡೆಸುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು.

ರಾಜ್ಯ ಆರ್ಥಿಕ ದಿವಾಳಿಯ ಅಂಚಿನಲ್ಲಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರದಿಂದಾಗಿ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಸ್ವತಃ ಉಪಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಕಡಾಡಿ ಲೇವಡಿ ಮಾಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಜನರಿಗೆ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಿಸಿಕೊಂಡಿದ್ದು, ಕೃಷ್ಣಾ ನದಿ ತೀರದ ಹಲವಾರು ಏತ ನೀರಾವರಿ, ಮಹಾದಾಯಿ ಯೋಜನೆಗಳು ಅನುಷ್ಟಾನಕ್ಕೆ ಬಂದಿಲ್ಲ ಜೊತೆಗೆ ಕಲ್ಲೋಳ ಬ್ರೀಡ್ಜ್‌ ಸೇರಿದಂತೆ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು ಅವುಗಳ ಬಗ್ಗೆ ಸರ್ಕಾರ ಉತ್ತರ ನೀಡಬೇಕಾದ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ದುರಾಡಳಿತದ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದರು.

ಶಾಸಕ ಡಿ.ಎಂ.ಐಹೊಳೆ, ನಿಖಿಲ ಕತ್ತಿ, ಸಂಜಯಗೌಡ ಪಾಟೀಲ, ಶಾಂಭವಿ ಅಶ್ವಥಪುರ, ಸತೀಶ ಅಪ್ಪಾಜಿಗೋಳ, ರಾಜು ಹರಗನ್ನವರ, ದುಂಡಪ್ಪಾ ಬೆಂಡವಾಡೆ, ರಮೇಶ ಕಾಳನ್ನವರ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.