ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಅಡಿಯಲ್ಲಿ ರಾಸಾಯನಿಕ ಸಿಂಪಡಣೆ ವೇಳೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮವನ್ನು ತಾಲೂಕಿನ ಚಿಕ್ಕಮತಿಘಟ್ಟ ಗ್ರಾಮದಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ 120 ರೈತರು ಭಾಗವಹಿಸಿ, ರಾಸಾಯನಿಕಗಳ ಸುರಕ್ಷಿತ ಬಳಕೆ, ವೈಯಕ್ತಿಕ ಸುರಕ್ಷತಾ ಸಾಧನಗಳ ಉಪಯೋಗ, ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಕೀಟನಾಶಕಗಳ ಬಳಕೆ, ಗಾಳಿ ಬೀಸುವ ಸಮಯದಲ್ಲಿ ಸಿಂಪಡಣೆ ಮಾಡದಿರುವುದು ಹಾಗೂ ಸಿಂಪಡಣೆ ನಂತರ ಪಾಲಿಸಬೇಕಾದ ಸ್ವಚ್ಛತಾ ಕ್ರಮಗಳ ಕುರಿತು ಮಾಹಿತಿ ಪಡೆದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಾವೆಪ್ ವಿದ್ಯಾರ್ಥಿಗಳು ಸುರಕ್ಷತಾ ಕ್ರಮಗಳ ಮಹತ್ವವನ್ನು ಸಾರುವ ಬೀದಿ ನಾಟಕ (ಸ್ಕಿಟ್) ಪ್ರದರ್ಶಿಸಿದರು. ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿದಾಗ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅವುಗಳನ್ನು ಸರಿಯಾಗಿ ಪಾಲಿಸಿದಾಗ ದೊರೆಯುವ ಪ್ರಯೋಜನಗಳನ್ನು ಮನೋಜ್ಞವಾಗಿ ಅಭಿನಯದ ಮೂಲಕ ಪ್ರದರ್ಶಿಸಿ ರೈತರ ಮೆಚ್ಚುಗೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೀಟನಾಶಕಗಳ ಬಾಟಲಿಗಳ ಮೇಲಿರುವ ವಿವಿಧ ಬಣ್ಣದ ಲೇಬಲ್‌ಗಳು ಹಾಗೂ ಅವುಗಳ ಅರ್ಥ ಮತ್ತು ಮಹತ್ವವನ್ನು ವಿವರಿಸಿದರು. ರಾಸಾಯನಿಕಗಳ ವಿಷಕಾರಿತ್ವದ ಮಟ್ಟವನ್ನು ಗುರುತಿಸಿ, ಲೇಬಲ್‌ನಲ್ಲಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರೈತರಿಗೆ ತಿಳಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ರೈತರೊಂದಿಗೆ ಸಂವಾದ ನಡೆಸಿ, ರಾಸಾಯನಿಕಗಳ ಸುರಕ್ಷಿತ ಬಳಕೆ, ಸಂಗ್ರಹಣೆ, ಖಾಲಿ ಡಬ್ಬಿಗಳ ವಿಲೇವಾರಿ ಹಾಗೂ ವಿಷಬಾಧೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸೆಯ ಕುರಿತು ಅವರ ಸಂದೇಹಗಳಿಗೆ ಉತ್ತರಿಸಲಾಯಿತು. ಈ ಕಾರ್ಯಕ್ರಮವು ರೈತರಲ್ಲಿ ಸುರಕ್ಷಿತ ಕೀಟನಾಶಕ ಬಳಕೆಯ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.