ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಯನ್ನು ಪರಬಾರೆ ಮಾಡಿರುವ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಯ ದಾರಿ ತಪ್ಪಿಸುವ ನಿಟ್ಟಿನಲ್ಲಿ ಶಾಸಕರ ವಿಚಾರ ತೆಗೆದುಕೊಂಡು ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ಚಾಮರಾಜನಗರ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘಧ ಆಸ್ತಿ ಸಂರಕ್ಷಣಾ ಸಮಿತಿ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.15ರಂದು ಆದಿ ಕರ್ನಾಟಕ ಅಭಿವೃದ್ಧಿ ಸಂಘ ಹಾಗೂ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಕರೆಯಿಸಿ ದಾಖಲಾತಿಗಳನ್ನು ತನಿಖಾ ಸಮಿತಿ ಅವರು ಪಡೆದುಕೊಂಡಿದ್ದು, ಫೆ.20ರಂದು ಆಸ್ತಿಯ ಸರ್ವೆಯನ್ನು ಮಾಡಲಾಗುತ್ತಿದ್ದು, ತನಿಖೆ ಸಮಿತಿಯವರು ಆಸ್ತಿಯ ಸರ್ವೆ ಮಾಡುವುದಕ್ಕೆ ತನಿಖಾ ಸಮಿತಿಗೆ ಎಲ್ಲರು ಸಹಕಾರ ಕೊಡಬೇಕು ಆದರೆ ಆದಿಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷರು ಈ ಸಂದರ್ಭದಲ್ಲಿ ಶಾಸಕರ ಮೇಲೆ ಆರೋಪಗಳನ್ನು ಮಾಡಿ ತನಿಖಾ ಸಮಿತಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಸರ್ವೆ ನಂತರ ತನಿಖಾ ಸಮಿತಿ ವರದಿ ತಯಾರಿಸಿ ಜಿಲ್ಲಾಧಿಕಾರಿ ಅವರಿಗೆ ನೀಡಲಿದ್ದು, ಇದರಲ್ಲಿ ಸತ್ಯ ಸತ್ಯತೆ ಶೋಧನೆಯಾಗಲಿದೆ. ನ್ಯಾಯಯುತವಾಗಿ ತನಿಖೆ ನಡೆಯುವ ಸಂದರ್ಭದಲ್ಲಿ ಗೊಂದಲ ಉಂಟುಮಾಡುವುದಕ್ಕೆ ಶಾಸಕರ ವಿರುದ್ದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕರ ವಿರುದ್ಧ ಮತ್ತೊಬ್ಬರ ಶಾಸಕರನ್ನು ನಿಂದಿಸಿದರು ಎಂಬ ಹೇಳಿಕೆ ನೀಡಿ, ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆ ನೀಡಿರುವುದು ಸರಿಯಲ್ಲ. ಅಧ್ಯಕ್ಷರು ಅತ್ಮವಲೋಕನ ಮಾಡಿಕೊಂಡು ಇನ್ನಾದರು ಆಗಿರುವ ತಪ್ಪನ್ನು ಒಪ್ಪಿಕೊಂಡು ಸಮಾಜದ ಆಸ್ತಿಯ ರಕ್ಷಣೆಯಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ಆರ್. ಮಹದೇವ್ ಮಾತನಾಡಿ, ನಂಜುಂಡಸ್ವಾಮಿ ಹಿರಿಯರು ಹಾಗೂ ಪ್ರಬುದ್ಧ ರಾಜಕಾರಣಿಗಳು ಎಂದು ಭಾವಿಸಿದ್ದೇವೆ. ಆದರೆ, ಅವರು ತಮ್ಮ ಸಮಾಜದ ಶಾಸಕರ ವಿರುದ್ಧವೇ ಮತ್ತೊಂದು ಸಮಾಜದ ಶಾಸಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ತನಿಖೆ ಹಾಗೂ ಸಮಾಜದ ಒಗ್ಗಟ್ಟು ಹೊಡೆಯುವ ಪಿತೂರಿ ಇದಾಗಿದೆ ಎಂದರು.ಬಿ. ರಾಚಯ್ಯ ಅವರ ಕುಟಂಬ ಯಾವತ್ತು ಯಾರನ್ನು ಸಹ ಏಕವಚನದಲ್ಲಿ ಮಾತನಾಡಿರುವ ನಿದರ್ಶನ ಇಲ್ಲ. ಆದೇ ರೀತಿ, ಅವರ ಪುತ್ರ ಎ.ಆರ್. ಕೃಷ್ಣಮೂರ್ತಿ ಯಾರನ್ನು ಏಕ ವಚನದಲ್ಲಿ ಮಾತನಾಡುವುದಿಲ್ಲ. ಗೌರವದಿಂದ ಎಲ್ಲಾ ಸಮಾಜದವರವನ್ನು ವಿಶ್ವಾಸದಿಂದ ಕಾಣುತ್ತಾರೆ. ಈ ಬಗ್ಗೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಇಬ್ಬರು ಶಾಸಕರು ಸಹ ಸಮಂಜಯಿಸಿ ನೀಡಿ, ಒಬ್ಬರಿಗೊಬ್ಬರು ಚರ್ಚೆ ನಡೆಸಿ, ತಮ್ಮಲ್ಲಿದ್ದ ಸಂದೇಹವನ್ನು ಪರಿಹರಿಸಿಕೊಂಡಿದ್ದಾರೆ. ಶಾಸಕರ ಹೊಂದಾಣಿಕೆಯನ್ನು ಸಹಿಸದ ನಂಜುಂಡಸ್ವಾಮಿ ಮತ್ತು ಅವರ ಬೆಂಬಲಿಗರು ಶಾಸಕರನ್ನು ಓಲೈಯಿಸಿಕೊಳ್ಳಲು ಇಂಥ ಬಾಲಿಶ ಹೇಳಿಕೆ ನೀಡಿದ್ದಾರೆ ಎಂದರು. ನಂಜುಂಡಸ್ವಾಮಿ ಅವರೊಂದಿಗಿದ್ದವರಲ್ಲಿ ಸಿ.ಕೆ. ರವಿಕುಮಾರ್ ಹಾಗೂ ರಾಮಸಮುದ್ರ ನಾಗರಾಜು ಪುಟ್ಟರಂಗಶೆಟ್ಟರನ್ನೇ ಸೋಲಿಸಬೇಕೆಂದು ಹೊರಟಿದ್ದವರು. ದಿ. ಧ್ರುವನಾರಾಯಣ ಅಂದು ಸಂತೇಮರಹಳ್ಳಿಯಲ್ಲಿ ಕರೆದಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಪುಟ್ಟರಂಗಶೆಟ್ಟರ ವಿರುದ್ದ ಸಾಕಷ್ಟು ಆರೋಪಗಳನ್ನು ಮಾಡಿ, ಈ ಬಾರಿ ಸೋಲಿಸೇ ತೀರುತ್ತೇವೆ ಎಂದು ಸಭೆಯಿಂದ ಹೊರ ನಡೆದವರು. ಇದೇ ನಂಜುಂಡಸ್ವಾಮಿ ಅವರು ಪುತ್ರ ಮಹೇಶ್ ಇದಕ್ಕೆ ಸೂತ್ರಧಾರ. ಸಭೆಯಿಂದ ಹೊರ ಹೋಗುತ್ತಿದ್ದವರನ್ನು ತಡೆದು ಮತ್ತೇ ಸಭೆಗೆ ಕರೆತರಲು ವಿಫಲರಾಗಿದ್ದರು. ಇದೆಲ್ಲವನ್ನು ಇವರು ಮರೆತಿರಬಹುದು. ಆದರೆ, ವಾಸ್ತವವಾಗಿ ಅಂದು ನಾವೆಲ್ಲರು ಶಾಸಕರ ಪರವಾಗಿ ಕೆಲಸ ಮಾಡಿ, ಅವರ ಗೆಲುವಿಗೆ ಶ್ರಮಿಸಿದ್ದೇವೆ. ಸಿ.ಕೆ. ರವಿಕುಮಾರ್ ಪುಟ್ಟರಂಗಶೆಟ್ಟರ ಪರ ಎಲ್ಲಿ ಪ್ರಚಾರ ಮಾಡಿದ್ದರು? ಈಗ ನಮ್ಮ ಶಾಸಕರ ವಿರುದ್ದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿರುವುದಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಹದೇವ್ ಪ್ರತಿಕ್ರಿಯೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಯಜಮಾನ ರಾಮಸಮುದ್ರ ಚನ್ನಂಜಯ್ಯ, ಮುಖಂಡರಾದ ಹೆಬ್ಬಸೂರು ರಂಗಸ್ವಾಮಿ, ಆಲೂರು ಶೇಷಣ್ಣ, ಯುವಮುಖಂಡ ನಲ್ಲೂರು ಮಹದೇವಸ್ವಾಮಿ, ಹೆಬ್ಬಸೂರು ಉಮೇಶ್, ನಾಗರಾಜು ಹಾಜರಿದ್ದರು.