ಆರೋಗ್ಯ ಜಾಗೃತಿ ಮೂಡಿಸುವುದು ವೈದ್ಯರ ಕಾಳಜಿ: ಡಾ.ಎಸ್.ಶ್ರೀನಿವಾಸ

| Published : Jul 25 2024, 01:16 AM IST

ಆರೋಗ್ಯ ಜಾಗೃತಿ ಮೂಡಿಸುವುದು ವೈದ್ಯರ ಕಾಳಜಿ: ಡಾ.ಎಸ್.ಶ್ರೀನಿವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಜೈಮಾತಾ ಹೆಲ್ತ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್. ಶ್ರೀನಿವಾಸ ಸೊರಬ ಸಂಘಕ್ಕೆ ಔಪಚಾರಿಕ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಸಂಸದೀಯ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಜನಸಾಮಾನ್ಯರ ಆರೋಗ್ಯದ ಬಗ್ಗೆ ವೈದ್ಯರಿಗೆ ಇರುವ ಕಾಳಜಿ ತೋರಿಸಲು ಏಕಮೇವ ದಾರಿ ಎಂದರೆ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನಮಾನಸದಲ್ಲಿ ಆರೋಗ್ಯದ ಬಗ್ಗೆ ವಿಶ್ವಾಸ ಮೂಡಿಸುವುದಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಶ್ರೀನಿವಾಸ ತಿಳಿಸಿದರು.

ಪಟ್ಟಣದ ಜೈಮಾತಾ ಹೆಲ್ತ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸೊರಬ, ಸಾಗರ ಭಾರತೀಯ ವೈದ್ಯಕೀಯ ಸಂಘಕ್ಕೆ ಅಧಿಕೃತ ಭೇಟಿ ನೀಡಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮತದಾನದ ಸಮಯದಲ್ಲಿ ದೇಶದ ಆರೋಗ್ಯದ ವಿಚಾರಗಳು ಒಂದು ಪ್ರಮುಖ ವಿಷಯವಾಗಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಐಎಂಎ ಈ ನಿಟ್ಟಿನಲ್ಲಿ ಒಂದು ಆರೋಗ್ಯ, ಒಂದು ಪ್ರನಾಳಿಕೆ ಸಿದ್ಧಪಡಿಸುವ ಬಗ್ಗೆ ಜವಾಬ್ದಾರಿ ವಹಿಸಿಕೊಂಡಿದೆ. ಐಎಂಎ ದೇಶದ ಜನರ ಆರೋಗ್ಯದ ಅಭಿವೃದ್ಧಿಗಾಗಿ ಮತ್ತು ಅದನ್ನು ಕಾರ್ಯಗತ ಗೊಳಿಸುವುದಕ್ಕಾಗಿ ಸರ್ಕಾರದೊಂದಿಗೆ ಜತೆ ಕೆಲಸ ನಿರ್ವಹಿಸುವಲ್ಲಿ ತನ್ನ ಸಲಹೆ ನೀಡುತ್ತಾ ಬಂದಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ೯೨ಕ್ಕೂ ಹೆಚ್ಚಿನ ವೈದ್ಯರು ಮರಣ ಹೊಂದಿದ್ದಾರೆ. ವೈದ್ಯರು ಸಂಘದ ಸದಸ್ಯರಾಗಿದ್ದರೆ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಮರಣ ಹೊಂದಿದ ವೈದ್ಯರಿಗೆ ೫೦ ಲಕ್ಷ ಪರಿಹಾರವನ್ನು ನೀಡಲಾಗುತ್ತಿದ್ದು, ಎಲ್ಲಾ ವೈದ್ಯರು ಈ ಯೋಜನೆಗೆ ಸದಸ್ಯರಾಗುವ ಮೂಲಕ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

ಹೋಮಿಯೋಪಥಿ, ಆಯುರ್ವೇದಿಕ್, ಆಯುಷ್ ಪದ್ಧತಿಯನ್ನು ಕೆಲವು ವೈದ್ಯರು ಕ್ರಾಸ್ ಪ್ರಾಕ್ಟಿಸ್ ಮಾಡಿ ಅಲೋಪಥಿಕ್ ಔಷಧಿ ನೀಡುತ್ತಿರುವುದರ ಬಗ್ಗೆ ಗಮನ ಹರಿಸಲು ಕೋರಿದಾಗ ವೈದ್ಯರು ಯಾವ ವಿಷಯದಲ್ಲಿ ಪರಿಣಿತಿ ಹೊಂದಿದ್ದಾರೋ ಅದಕ್ಕೆ ಸಂಬಂಧಿಸಿದ ಆಧಾರದ ಮೇಲೆ ಚಿಕಿತ್ಸೆ, ಔಷಧಿ ನೀಡುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಐಎಂಎ ಎಲ್ಲಾ ವೈದ್ಯರ ಪ್ರಧಾನ ವೇದಿಕೆಯಾಗಿದ್ದು, ವೈದ್ಯರ ಕ್ಷೇಮಾಭಿವೃದ್ಧಿ, ರಕ್ಷಣೆ ಹಾಗೂ ಬಲವರ್ಧನೆಗೆ ಕಟಿಬದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯರಿಗೆ ಸರ್ಕಾರದಿಂದ ಹೆಚ್ಚಿನ ರಕ್ಷಣೆ ಸಿಗದಿರುವುದು ವಿಷಾದಕರ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದೇವೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಯು.ಎನ್.ಲಕ್ಷ್ಮೀಕಾಂತ ಮಾತನಾಡಿ, ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಸೂಚನೆಯಂತೆ ೭/೩ ಅಡಿ ಅಳತೆಯ ನಾಮಫಲಕವನ್ನು ಅಳವಡಿಸಲು ಸೂಚನೆ ನೀಡಿದ್ದು, ಕೆಲವು ಕ್ಲಿನಿಕ್‌ನವರಿಗೆ ಇದು ಕಷ್ಟಕರವಾಗಿದೆ. ಸ್ಥಳೀಯ ವೈದ್ಯರಾದ ಡಾ. ಸೈಯದ್ ಹಾಷಂ ರವರು ಕಳೆದ ೫ ದಶಕಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದು, ಈಗ ಅವರು ೮೨ನೇ ವಸಂತಕ್ಕೆ ಕಾಲಿಟ್ಟಿರುವುದರಿಂದ ಬರಲಿರುವ ರಾಜ್ಯ ಮೆಡಿಕಲ್ ಸಮಾವೇಶದಲ್ಲಿ ಸನ್ಮಾನಿಸಿ ಗೌರವಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಡಾ.ಎಂ.ಕೆ.ಭಟ್ ಸೊರಬ, ಡಾ.ಸಾಗರ್, ಡಾ.ಸೈಯದ್ ಹಾಷಂ, ಡಾ. ಕಿಶನ್ ಭಾಗವತ್, ಡಾ.ನವೀನ್, ಡಾ.ಸುಷ್ಮಾ ಬಿ.ಎನ್, ಡಾ.ರಾಜನಂದಿನಿ ಕಾಗೋಡು, ತಾಲೂಕು ಆರೋಗ್ಯಾಧಿಕಾರಿ ಡಾ.ವಿನಯ ಪಾಟೀಲ್ ಉಪಸ್ಥಿತರಿದ್ದರು.