ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಬೇಕು: ಪ್ರೊ. ಅಂಬಳಿಕೆ ಹಿರಿಯಣ್ಣ

| Published : Jan 15 2024, 01:47 AM IST

ಸಾರಾಂಶ

ಮಕ್ಕಳಲ್ಲಿ ಸ್ವಂತಿಕೆ ಮತ್ತು ಸೃಜನಶೀಲತೆ ಬೆಳೆಸುವ ನಿಟ್ಟಿನಲ್ಲಿ ಪೋಷಕರು ಅವರಿಗೆ ಮನೆಯಲ್ಲಿ ಕಥೆ ಹೇಳುವುದು ಹಾಡು ಹಾಡುವುದು ನೃತ್ಯ ಮಾಡುವುದು ವಾದ್ಯ ನುಡಿಸುವುದು ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರತಿನಿತ್ಯ ಕಲಿಸಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ತಿಳಿಸಿದರು.

- ಕುವೆಂಪು ಕಲಾಮಂದಿರದಲ್ಲಿ ಓಣಿ ಮನೆ ಪ್ರಕಾಶನದ 25ನೇ ಸಂಭ್ರಮೋತ್ಸವ: ಪುಸ್ತಕ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಕ್ಕಳಲ್ಲಿ ಸ್ವಂತಿಕೆ ಮತ್ತು ಸೃಜನಶೀಲತೆ ಬೆಳೆಸುವ ನಿಟ್ಟಿನಲ್ಲಿ ಪೋಷಕರು ಅವರಿಗೆ ಮನೆಯಲ್ಲಿ ಕಥೆ ಹೇಳುವುದು ಹಾಡು ಹಾಡುವುದು ನೃತ್ಯ ಮಾಡುವುದು ವಾದ್ಯ ನುಡಿಸುವುದು ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರತಿನಿತ್ಯ ಕಲಿಸಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಸಲಹೆ ಮಾಡಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಓಣಿ ಮನೆ ಪ್ರಕಾಶನದ 25ನೇ ಸಂಭ್ರಮೋತ್ಸವದಲ್ಲಿ ಸಾಹಿತಿ ಮೇಕನ ಗದ್ದೆ ಲಕ್ಷ್ಮಣಗೌಡರು ಬರೆದ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬದಲಾದ ವಿದ್ಯಮಾನ ಗಳಿಂದಾಗಿ ನಾವೆಲ್ಲಾ ಇಂದು ಒಂದು ರೀತಿ ಕೃತ್ರಿಮವಾದ ಬದುಕನ್ನು ಬದುಕುತ್ತಿದ್ದೇವೆ. ವಿಸ್ಮೃತಿಗೊಳಗಾಗಿ ನಮ್ಮ ಪರಂಪರೆ, ಸಾಂಪ್ರದಾಯಿಕ ವಿಜ್ಞಾನವನ್ನು ಮರೆಯುತ್ತಿದ್ದೇವೆ. ನಮ್ಮ ಮಕ್ಕಳು ಪುಸ್ತಕದ ಹುಳುಗಳಾಗಿವೆ ಅಂಕ ಗಳಿಸುವ ಯಂತ್ರಗಳಾಗಿವೆ ಎಂದು ವಿಷಾದಿಸಿದರು. ತಂದೆ ತಾಯಿ ಅಜ್ಜ ಅಜ್ಜಿ ಮನೆಯಲ್ಲಿ ತಮ್ಮ ಮಕ್ಕಳಿಗೆ ಕಥೆ ಹೇಳುವುದು, ಹಾಡು ಹಾಡುವುದು, ನೃತ್ಯ ಮಾಡುವುದು, ವಾದ್ಯ ನುಡಿಸುವುದು, ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ನಿರಂತರವಾಗಿ ಕಲಿಸಿದರೆ ಮಾತ್ರ ಮಕ್ಕಳು ಸ್ವಂತಿಕೆ ಬೆಳೆಸಿ ಕೊಳ್ಳುತ್ತಾರೆ, ಸೃಜನಶೀಲರಾಗುತ್ತಾರೆ, ಮಾನಸಿಕ ದೈಹಿಕವಾಗಿ ಸದೃಢರಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ಮೇಕನಗದ್ದೆ ಲಕ್ಷ್ಮಣಗೌಡರು ಸಾಹಿತಿ, ಸಂಶೋಧಕ, ಲೇಖಕರಾಗಿ ಬೆಳೆದಿರುವುದು ಮಲೆನಾಡಿಗೆ ಹೆಮ್ಮೆಯ ಸಂಗತಿ . ಲಕ್ಷ್ಮಣಗೌಡರು ರಾಷ್ಟ್ರಕವಿ ಕುವೆಂಪು ಮತ್ತು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಯವರಿಂದ ಪ್ರಭಾವಿತರಾಗಿದ್ದು ತಮ್ಮ ಬರಹ ಗಳಲ್ಲಿ ಅದರ ಚಾಪು ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಪುಸ್ತಕಗಳನ್ನು ಓದುವುದರಿಂದ ಮಸ್ತಕ ಬೆಳೆಯುತ್ತದೆ ನಮ್ಮ ಜ್ಞಾನ ವೃದ್ಧಿಸುತ್ತದೆ ಎಂದರು.

ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡರು ಬರೆದಿರುವ ಏಳು ಪುಸ್ತಕಗಳನ್ನು ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಭಿಮಾನಿಗಳು ಲಕ್ಷ್ಮಣ ಗೌಡರನ್ನು ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಕನ ಗದ್ದೆ ಲಕ್ಷ್ಮಣಗೌಡ ತಮ್ಮ ಏಳಿಗೆಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಓಣಿ ಮನೆ ಪ್ರಕಾಶನದ ಮಹಾ ಪೋಷಕ ಎಂ.ಬಿ. ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಕನ್ನಡ ಸಂಘಟನೆಗಳ ಒಕ್ಕೂಟದ ಸಂಚಾಲಕ ವಿ.ಎಂ. ಕುಮಾರಸ್ವಾಮಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ಡಾ. ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ, ಸಾಹಿತಿ ಭಾಷಾಂತರಕಾರ ಡಾ. ಡಿ.ಎಸ್. ಜಯಪ್ಪಗೌಡ, ನಿವೃತ್ತ ಶಾಸನ ತಜ್ಞ ಎಚ್‌.ಎಂ. ನಾಗರಾಜ ರಾವ್, ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಇಂಜಿನಿಯರ್ ಅರವಿಂದಗೌಡ, ಆಶಾಕಿರಣ ಅಂಧ ಮಕ್ಕಳ ಶಾಲೆ ಪ್ರಾಂಶುಪಾಲ ಲಕ್ಷ್ಮಣಗೌಡ ಉಪಸ್ಥಿತರಿದ್ದರು. 14 ಕೆಸಿಕೆಎಂ 3

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಓಣಿ ಮನೆ ಪ್ರಕಾಶನದ 25ನೇ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡರು ಬರೆದಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.