ಸಾರಾಂಶ
ಕನ್ನಡಪ್ರಭ ವಾತೆ ಬಾಗಲಕೋಟೆ
ಪ್ರತಿಯೊಂದು ಸರಕಾರಿ ಪ್ರಾಯೋಜಿತ ಯೋಜನೆಗಳಿಗೆ ವಿಳಂಬವಿಲ್ಲದೇ ಆದ್ಯತೆ ಮೇರೆಗೆ ಸಾಲ ಮಂಜೂರಾತಿ ನೀಡುವ ಕಾರ್ಯವಾಗಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಬ್ಯಾಂಕರ್ಸ್‌ಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಅಗ್ರಣಿ ಬ್ಯಾಂಕ್ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಎಂಎಫ್ಎಂಇ, ಪಿಎಂಇಜಿಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮತ್ತು ನೇಕಾರ ಮುದ್ರಾ ಸಾಲಗಳಂತಹ ಎಲ್ಲಾ ಸರ್ಕಾರಿ ಪ್ರಾಯೋಜಿತ ಯೋಜನೆ ಪರಿಶೀಲಿಸಿ ಬಾಕಿ ಇರುವ ಸಾಲಗಳನ್ನು ತಕ್ಷಣವೇ ನೀಡುವಂತೆ ಸೂಚಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯಲ್ಲಿ ಉನ್ನತಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ಆಧಾರದ ಮೇಲೆ ಅಗತ್ಯವಿರುವ ಬಡ ಕುಟುಂಬಗಳಿಗೆ ಸಾಲಗಳಿಗೆ ಮಂಜೂರಾತಿ ನೀಡಬೇಕು. ಸಾಲ ವಿತರಣೆಗೆ ವಿಳಂಬ ಮಾಡುತ್ತಾ ಹೋದರೆ ಯೋಜನೆ ಸಮಪರ್ಕವಾಗಿ ಅನುಷ್ಠಾನಗೊಳ್ಳುವುದಿಲ್ಲ. ಆದ್ದರಿಂದ ವಿವಿಧ ಇಲಾಖೆಗಳಿಂದ ಫಲಾನುಭವಿಗಳ ಆಯ್ಕೆ ಪಟ್ಟಿ ಕಳುಹಿಸದ ತಕ್ಷಣ ಆದ್ಯತೆ ಮೇರೆಗೆ ಸಾಲ ಮಂಜೂರಾತಿ ನೀಡಬೇಕೆಂದು ತಿಳಿಸಿದರು.ಸಾಮಾಜಿಕ ಭದ್ರತಾ ಯೋಜನೆಯಡಿ ಗರಿಷ್ಠ ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಯೋಜನೆಯಡಿ ನೋಂದಾಯಿಸಲು ಬ್ಯಾಂಕರ್ಸ್‌ಗಳಿಗೆ ಸೂಚಿಸಿದರು. ಸಿಡಿ ಅನುಪಾತ ಮತ್ತು ವಾರ್ಷಿಕ ಕ್ರೆಡಿಟ್ ಯೋಜನೆ ಗುರಿ ಮತ್ತು ಜಿಲ್ಲೆ ಸಾಧನೆ ಪರಿಶೀಲನೆ ಮಾಡಿದರಲ್ಲದೇ 2025-26ಕ್ಕೆ ಪಿಎಲ್‌ಪಿ ಸಂಭಾವ್ಯ ಲಿಂಕ್ಡ್ ಯೋಜನೆ ಪ್ರಾರಂಭಿಸಿರುವುದಾಗಿ ತಿಳಿಸಿದರು. ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ ಹೂಗಾರ, ನಬಾರ್ಡ್ ಮಂಜುನಾಥ ರೆಡ್ಡಿ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಕೆ.ಎಂ.ಶೈಲಜಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.