ಕೃಷಿ ಹೊಂಡ ಸಹಾಯಧನ ರೈತರ ಖಾತೆಗೆ ಜಮಾ ಮಾಡಿ

| Published : Jul 25 2024, 01:23 AM IST

ಸಾರಾಂಶ

ಕೇವಲ ರೈತರೊಬ್ಬರಿಗೆ ₹ 48 ಸಾವಿರ ಹಣ ಮಾತ್ರ ಜಮೆಯಾಗಿದ್ದು, ಉಳಿದ ಹಣ ಇದುವರೆಗೂ ಜಮೆಯಾಗುತ್ತಿಲ್ಲ

ರೋಣ: ರೈತರು ತಮ್ಮ ಜಮೀನುಗಳಲ್ಲಿ ನಿರ್ಮಾಣ ಮಾಡಿಕೊಂಡಿರುವ ಕೃಷಿ ಹೊಂಡದ ಸಹಾಯಧನ ಹಣ ಶೀಘ್ರ ರೈತರ ಖಾತೆಗೆ ಜಮಾ ಮಾಡಬೇಕು .ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಎಸ್.ಎಂ. ಮುಲ್ಲಾ ಮಾತನಾಡಿ, ರೈತರ ತಮ್ಮ ಜಮೀನುಗಳಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿಕೊಂಡಿದ್ದು, ರೈತರಿಗೆ ಬರಬೇಕಿದ್ದ ಸಂಪೂರ್ಣ ಸಹಾಯಧನ ಹಣ ರೈತರ ಖಾತೆಗೆ ಜಮೆ ಮಾಡಲು ಕೃಷಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಕೇವಲ ರೈತರೊಬ್ಬರಿಗೆ ₹ 48 ಸಾವಿರ ಹಣ ಮಾತ್ರ ಜಮೆಯಾಗಿದ್ದು, ಉಳಿದ ಹಣ ಇದುವರೆಗೂ ಜಮೆಯಾಗುತ್ತಿಲ್ಲ. ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ತಂತಿ ಬೇಲಿ ನಿರ್ಮಾಣ ಪೂರ್ಣಗೊಂಡ ನಂತರವೇ ಬಾಕಿ ಹಣ ಜಮೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ತಂತಿ ಬೇಲಿ ನಿರ್ಮಿಸಿಕೊಂಡರೂ ಸಹಾಯಧನ ಜಮೆಯಾಗಿಲ್ಲ. ಶೀಘ್ರದಲ್ಲಿಯೇ ರೈತರಿಗೆ ಹಣ ಜಮೆ ಮಾಡುವಲ್ಲಿ ಕೃಷಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ, ಕೃಷಿ ಭಾಗ್ಯ ಯೋಜನೆಯಲ್ಲಿ 2023-24 ಹಾಗೂ ಪ್ರಸಕ್ತ ಸಾಲಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿರುವ ರೈತರು ಕೃಷಿಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.‌ ಆ ಬಳಿಕವೇ ಸಹಾಯಧನ ಜಮಾ ಆಗುವದು. ಈಗಾಗಲೇ ಶೇ. 75 ರಷ್ಟು ಹಣ ರೈತರು ತಂತಿ ಬೇಲಿ ನಿರ್ಮಿಸಿಕೊಂಡಿದ್ದು, ಅವರೆಲ್ಲರ ಖಾತೆಗಳಿಗೂ ಹಣ ಜಮೆಯಾಗಿದ್ದು, ತಂತಿ ಬೇಲಿ ನಿರ್ಮಾಣ ಪೂರ್ಣ ಮಾಡಿಕೊಂಡ ರೈತರ ಖಾತೆಗಳಿಗೆ ಸಂಪೂರ್ಣ ಹಣ ಜಮೆ ಮಾಡಲಾಗುತ್ತದೆ. ಕಡ್ಡಾಯವಾಗಿ ರೈತರು ತಂತಿ ಬೇಲಿ ನಿರ್ಮಾಣ ಮಾಡಿಕೊಳ್ಳಬೇಕು. ಉಳಿದ ಹಣ ರೈತರಿಗೆ ಶೀಘ್ರದಲ್ಲಿಯೇ ಜಮೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಸವರಾಜ ಅಂಗಡಿ, ಸುಭಾಸ ಮಂಗಳೂರ, ಸಂಗಪ್ಪ ಕಂಬಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಇದ್ದರು.