ರಾಜಕೀಯ ನುಸುಳುವಿಕೆಯಿಂದಲೇ ಧಾರವಾಡ ಪ್ರತ್ಯೇಕ ಪಾಲಿಕೆಯ ಭಾಗ್ಯ ಈಗಾಗಲೇ ವಿಳಂಬವಾಗಿದೆ. ಮುಂದುವರಿದು ಪ್ರತ್ಯೇಕ ಪಾಲಿಕೆ ವಿಷಯವಾಗಿ ಕ್ರೆಡಿಟ್ ವಾರ್‌ಗೆ ಹೋರಾಟದ ವೇದಿಕೆಯೂ ಸಾಕ್ಷಿಯಾಯಿತು.
ಧಾರವಾಡ:
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡಿಕೆ ಶುರುವಾದಾಗಿನಿಂದಲೂ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಜಟಾಪಟಿ ನಡೆದಿದ್ದು, ರಾಜಕೀಯ ನುಸುಳುವಿಕೆಯಿಂದಲೇ ಪ್ರತ್ಯೇಕ ಪಾಲಿಕೆಯ ಭಾಗ್ಯ ಈಗಾಗಲೇ ವಿಳಂಬವಾಗಿದೆ. ಮುಂದುವರಿದು ಪ್ರತ್ಯೇಕ ಪಾಲಿಕೆ ವಿಷಯವಾಗಿ ಕ್ರೆಡಿಟ್ ವಾರ್‌ಗೆ ಹೋರಾಟದ ವೇದಿಕೆಯೂ ಸಾಕ್ಷಿಯಾಯಿತು.ಇಲ್ಲಿಯ ಪಾಲಿಕೆ ಕಚೇರಿ ಎದುರು ಕಳೆದ 12 ದಿನಗಳಿಂದ ಪ್ರತ್ಯೇಕ ಪಾಲಿಕೆಗಾಗಿ ತೀವ್ರ ಹೋರಾಟ ನಡೆಯುತ್ತಿದ್ದು, ಮಂಗಳವಾರದ ಬೆಳವಣಿಗೆಯಲ್ಲಿ ರಾಜ್ಯಪಾಲರು ಕೆಲವು ಷರತ್ತುಗಳೊಂದಿಗೆ ಅನುಮೋದನೆ ನೀಡಿದ್ದು, ಈ ವಿಷಯವನ್ನು ಸಂಭ್ರಮಿಸುವ ಬದಲು ಬಿಜೆಪಿ- ಕಾಂಗ್ರೆಸ್ ನಾಯಕರ ಮಧ್ಯೆ ಮತ್ತದೇ ಕ್ರೆಡಿಟ್ ವಾರ್ ನಡೆದು ನೈಜ ಹೋರಾಟಗಾರರನ್ನು ಕೆರಳಿಸಿದ ಘಟನೆ ನಡೆಯಿತು.
ಏನಿದು ವಾರ್:ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅಭಿಮಾನಿಗಳ ಬಳಗ ಮತ್ತು ಬಿಜೆಪಿ ವತಿಯಿಂದ ಮಂಗಳವಾರ ಬೃಹತ್ ರ‍್ಯಾಲಿ ನಡೆಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿತ್ತು. ಹೋರಾಟದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸತ್ಯ ಪ್ರತಿಪಾದನೆ ಹೆಜ್ಜೆ ಹಾಕಿದವರ ಬೆಂಬಲವನ್ನು ಮಾತ್ರ ಪ್ರತಿಭಟನಾಕಾರರು ಸ್ವೀಕರಿಸುತ್ತಿದ್ದರು. ನಾಗರಾಜ್ ಗೌರಿ ಹಾಗೂ ಬೆಂಬಲಿಗರ ಸತ್ಯಪ್ರತಿಪಾದನೆ ಪಡೆಯುತ್ತಿರುವಾಗಲೇ ಬಿಜೆಪಿಯವರು ಘೋಷಣೆ ಕೂಗಿ ಬೆಂಬಲ ನೀಡಲು ವೇದಿಕೆಗೆ ಬಂದರು. ಇದು ಬಿ.ಡಿ. ಹಿರೇಮಠ ಅವರನ್ನು ಕೆರಳಿಸಿತು. ಯಾರೂ ರಾಜಕೀಯ ಮಾಡಬಾರದು ಎಂದ ಅವರು, ಬಿಜೆಪಿ ನಾಯಕರಿಗೆ ಕೇಸರಿ ಶಾಲು ತೆಗೆಯಲು ಹೇಳಿದರು. ಕೆಲ ಬಿಜೆಪಿಗರಿಂದ ಆಕ್ಷೇಪ ವ್ಯಕ್ತವಾಯಿತು. ನೀವು ಕೇಸರಿ-ಬಿಳಿ- ಹಸಿರು ಬಣ್ಣದ ಖಾದಿ ಮಾಲೆ ತೆಗೆದು ಹಾಕುವಂತೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನವರ ಬಳಿ ಬಂದರು. ಆಗ ಶಾಂತಿ.. ಶಾಂತಿ.. ಇಲ್ಲದಿದ್ದರೆ ಬೆಂಕಿ.. ಬೆಂಕಿ ಎನ್ನುತ್ತಲೇ ಬಿ.ಡಿ. ಹಿರೇಮಠ ಹರಿಹಾಯ್ದರು.
ಊರು ಹಾಳು ಮಾಡಿದ್ದೀರಿ:ಇದಲ್ಲದೇ, ರಾಜ್ಯಪಾಲರು ಸರ್ಕಾರಕ್ಕೆ ಕಳುಹಿಸಿದ ಪತ್ರ ಓದುವಾಗಲೂ ಬಿಜೆಪಿ ಹಾಗೂ ಕೈ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ಮಧ್ಯೆ ಪ್ರವೇಶಿಸಿದ ಬಿ.ಡಿ. ಹಿರೇಮಠ, ನಿಮ್ಮ ಜಗಳ ಇಲ್ಲಿ ತರಬೇಡಿ. ಗಂಡ- ಹೆಂಡಿರ ನಡುವೆ ಕೂಸು ಬಡವಾಯಿತು ಎಂಬಂತೆ ನಿಮ್ಮ ನಡುವೆ ಧಾರವಾಡ ಜನರು ಕಷ್ಟಪಡಬೇಕಾಗಿದೆ. ನಾವು ಯಾರನ್ನೂ ನಂಬುವುದಿಲ್ಲ. ಎಲ್ಲದರಲ್ಲೂ ರಾಜಕಾರಣ ಬೆರೆಸಿ ಊರು ಹಾಳು ಮಾಡುತ್ತಿದ್ದೀರಿ. ನಿಮ್ಮ ಪ್ರತ್ಯೇಕತೆ ಹೋರಾಟ ಮುಂದಿನ ಚುನಾವಣೆ ಮೇಲಿದೆ ಎಂದು ಚಾಟಿ ಬೀಸಿದರು.
ವೇದಿಕೆಯಲ್ಲಿ ಮಹಾದೇವ ಹೊರಟ್ಟಿ, ಮೇಯರ್ ಜ್ಯೋತಿ ಪಾಟೀಲ, ಶಿವು ಹಿರೇಮಠ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಶಿವಶಂಕರ ಹಂಪಣ್ಣವರ, ರಾಜು ಕಮತಿ, ಗುರುರಾಜ ಹುಣಶಿಮರದ, ಸಂಜಯ ಕಪಟಕರ, ವಸಂತ ಅರ್ಕಾಚಾರ್ಯ, ಆನಂದ ಸಿಂಗನಾಥ, ಮಂಜುನಾಥ ಮಲ್ಲಿಗವಾಡ, ದಾನಪ್ಪ ಕಬ್ಬೇರ್, ಶಿವಣ್ಣ ಬಡವಣ್ಣನವರ, ಸುರೇಶ ಬೇದ್ರೆ, ಮೋಹನ ರಾಮದುರ್ಗ ಮತ್ತಿತರರು ಇದ್ದರು.ರಕ್ತದಲ್ಲಿ ಪತ್ರ ಬರೆದ ಜಾಧವ.
ಧಾರವಾಡ ಪ್ರತ್ಯೇಕ ಪಾಲಿಕೆ ಆಗಲೆಬೇಕು ಎಂದು ಒತ್ತಾಯಿಸಿದ ಬಸವರಾಜ ಜಾಧವ, ಕಾರ್ತಿಕ ನಾಯಕ, ಶಿವು ನಿಗದಿ, ಬಸವರಾಜ ಹೆಬ್ಬಳ್ಳಿ, ಕಿಶೋರ ಬಡಿಗೇರ, ದೀಪಾ ನೀರಲಕಟ್ಟಿ ರಕ್ತದಲ್ಲಿಯೇ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಪತ್ರ ಬರೆದರು.