ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಪ್ರಯಾಗರಾಜ್ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಶಿವೊರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ 6 ಜನರ ಮೃತದೇಹಗಳು ಮಂಗಳವಾರ ನಗರಕ್ಕೆ ಆಗಮಿಸಿದ್ದು ಸಂಜೆ 8.30ಕ್ಕೆ ಅಂತ್ಯಸಂಸ್ಕಾರ ನಡೆಯಿತು.ಕಳೆದ ಮಂಗಳವಾರ (ಫೆ.18)ದಂದು ಕುಂಭಮೇಳಕ್ಕೆ ತೆರಳಿದ್ದ ನಗರದ ಲಕ್ಷ್ಮೀ ಬಡಾವಣೆ ನಿವಾಸಿ ಮೃತ ಬಾಲಚಂದ್ರ ಗೌಡರ(50) ಗುರುವಾರ ಪೇಟ ನಿವಾಸಿ ವಿರುಪಾಕ್ಷ ಗುಮತಿ(61), ಗೊಂಬಿಗುಡಿ ಹತ್ತಿರದ ನಿವಾಸಿ ಬಸವರಾಜ್ ಕುರಟ್ಟಿ(63), ಗುರುವಾರ ಪೇಟ ನಿವಾಸಿ ಬಸವರಾಜ್ ದೊಡಮನಿ(49), ಬಾಗಲಕೋಟ ಜಿಲ್ಲೆ ಗುಳೇದಗುಡ್ಡದ ನಿವಾಸಿ ಈರಣ್ಣ ಶೇಬಿನಕಟ್ಟಿ(27) ಅಂತ್ಯಕ್ರಿಯೆ ಗೋಕಾಕ ನಗರದ ಎನ್‌ಎಸ್‌ಎಫ್ ಹತ್ತಿರದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಹುಕ್ಕೇರಿ ತಾಲೂಕಿನ ಆನಂದಪುರ ಗ್ರಾಮದ ನಿವಾಸಿ ಸುನೀಲ್ ಶೇಡಶ್ಯಾಳೆ(45) ಮೃತ ದೇಹವನ್ನು ಆನಂದಪುರದ ಸ್ವಗ್ರಾಮಕ್ಕೆ ಆ್ಯಂಬುಲೆನ್ಸ್ ಮೂಲಕ ಗೋಕಾಕ ನಗರದಿಂದ ರವಾನಿಸಲಾಯಿತು. ಮೃತ ದೇಹಗಳನ್ನು ಮಧ್ಯಪ್ರದೇಶದಿಂದ ರವಾನಿಸಲಾದ ಆ್ಯಂಬುಲೆನ್ಸನಲ್ಲಿ ಇನ್ನೊರ್ವ ಗಾಯಾಳು ಸದಾಶಿವ ಉಪದಲಿ ಅವರನ್ನು ಸಹ ಕರೆತರಲಾಗಿತ್ತು. ಎದೆಯ ಭಾಗಕ್ಕೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರ ಪಾರ್ಥಿವ ಶರೀರ ಮಧ್ಯಪ್ರದೇಶದಿಂದ ಸೋಲ್ಲಾಪೂರ ಮಾರ್ಗವಾಗಿ ಗೋಕಾಕ ನಗರಕ್ಕೆ ತರಲಾಗಿತ್ತು. ನಗರದ ತಂಬಾಕಿ ಗೋಡೌನ ಹತ್ತಿರದಲ್ಲಿ ಮೃತರ ಪಾರ್ಥಿವ ಶರೀರವನ್ನು ಪ್ರತ್ಯೇಕ ವಾಹನಗಳ ಮೂಲಕ ನಗರದ ಬಸವೇಶ್ವರ ವೃತ್ತ ಸೇರಿ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಿ ರಾಮಲಿಂಗೇಶ್ವರ ದೇವಸ್ಥಾನ(ಗೊಂಬಿ ಗುಡಿ) ಹತ್ತಿರ ತರಲಾಯಿತು. ಅಲ್ಲಿಂದ ಗೋಕಾಕ ನಗರದ ಎನ್‌ಎಸ್‌ಎಫ್ ಹತ್ತಿರದ ನೇಕಾರ ಸಮಾಜದ ರುದ್ರಭೂಮಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನಡೆಸಿದರು.
ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ, ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮಣ್ಣವರ, ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಮಹಾಂತೇಶ ಕಡಾಡಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು. ಮೃತರ ಪಾರ್ಥಿವ ಶರೀರ ಬರುವ ಹಿನ್ನಲೆಯಲ್ಲಿ ಮಾರುಕಟ್ಟೆ ಪ್ರದೇಶದ ವ್ಯಾಪಾರಸ್ಥರು ಭಾಗಶಃ ಅಂಗಡಿ ಮುಗ್ಗಟ್ಟಗಳನ್ನು ಬಂದ್ ಮಾಡಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮೃತರೆಲ್ಲರೂ ನೇಕಾರ ಸಮಾಜದವರಾಗಿದ್ದು ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.ಚಿಕಿತ್ಸೆ ಫಲಿಸದೆ ಡ್ರೈವರ್ ಸಾವು:
ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಶಿವೊರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಶಿಂಧಿಕುರಬೇಟ ಗ್ರಾಮದ ನಿವಾಸಿ ಡ್ರೈವರ್ ಮುಷ್ತಾಕ ಕಿಲ್ಲೇದಾರ (35) ಶಿವೊರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತನಾಗಿದ್ದಾನೆ. ಮೃತನ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ಶಿಂಧಿಕುರಬೇಟಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.ಡ್ರೈವರ್ ಮುಷ್ತಾಕ ಕಿಲ್ಲೇದಾರ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನಿಗಿದ್ದು ಅವರ ಪಾರ್ಥಿವ ಶರೀರ ಶಿಂಧಿಕುರಬೇಟ ಗ್ರಾಮಕ್ಕೆ ಕರೆ ತರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ದುರ್ಘಟನೆಯಲ್ಲಿ ಮೃತ ಪಟ್ಟ ಕುಟುಂಬದ ಸದಸ್ಯರಿಗೆ ಸರಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ರಮೇಶ ಜಾರಕಿಹೊಳಿ, ಶಾಸಕಕುಂಭಮೇಳಕ್ಕೆ ತೆರಳಿದ್ದ ನೇಕಾರ ಸಮಾಜದ 6 ಜನ ಸಾವನ್ನಪ್ಪಿದ್ದು, ಮೃತ ಕುಟುಂಬಸ್ಥರಿಗೆ ಮಧ್ಯಪ್ರದೇಶ ಬಿಜೆಪಿ ಸರಕಾರದಿಂದ ಎಲ್ಲ ರೀತಿಯ ಪರಿಹಾರ ಕಲ್ಪಿಸುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತೇನೆ. ರಾಜ್ಯ ಸರಕಾರವು ಸಹ ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಆ ಕುಟುಂಬಗಳಿಗೆ ಆಸರೆಯಾಗಬೇಕು. - ಜಗದೀಶ ಶೆಟ್ಟರ, ಲೋಕಸಭಾ ಸದಸ್ಯರು