ಪಾಕ್‌ ವಿರುದ್ಧ ಗೆದ್ದಿದ್ದಕ್ಕೆರಾಜ್ಯಾದ್ಯಂತ ಸಂಭ್ರಮ

| Published : Oct 15 2023, 12:45 AM IST

ಪಾಕ್‌ ವಿರುದ್ಧ ಗೆದ್ದಿದ್ದಕ್ಕೆರಾಜ್ಯಾದ್ಯಂತ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅಹಮದಾಬಾದ್‌ನಲ್ಲಿ ಶನಿವಾರ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕ್ರಿಕೆಟ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು ಅಹಮದಾಬಾದ್‌ನಲ್ಲಿ ಶನಿವಾರ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕ್ರಿಕೆಟ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಬೆಂಗಳೂರು ಸೇರಿದಂತೆ ರಾಯಚೂರು, ಚಿತ್ರದುರ್ಗ, ಹಾಸನ, ವಿಜಯಪುರದಲ್ಲಿ ಅಭಿಮಾನಿಗಳಿಂದ ವಿಜಯೋತ್ಸವ ಆಚರಿಸಲಾಯಿತು. ರಾಯಚೂರಿನಲ್ಲಿ ಪಂದ್ಯ ವೀಕ್ಷಣೆಗಾಗಿ ವೀರ ಸಾವರ್ಕರ್‌ ಅಸೋಸಿಯೇಷನ್‌ನಿಂದ ಬೃಹತ್‌ ಎಲ್‌ಇಡಿ ಪರದೆ ಹಾಕಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನು ಪಂದ್ಯದಲ್ಲಿ ಭಾರತ ಜಯ ದಾಖಲಿಸುತ್ತಿದ್ದಂತೆ ದೊಡ್ಡ ದೊಡ್ಡ ತ್ರಿವರ್ಣ ಧ್ವ್ವಜಗಳನ್ನು ಕೈಯಲ್ಲಿ ಹಿಡಿದು ಅಭಿಮಾನಿಗಳು ಸಂಭ್ರಮಿಸಿದರು. ಅತ್ತ ಕೋಟೆನಾಡು ಚಿತ್ರದುರ್ಗದಲ್ಲೂ ಅಭಿಮಾನಿಗಳು ಟೀಂ ಇಂಡಿಯಾ ಪರ ಜಯಘೋಷ ಕೂಗಿ, ಭಾರತದ ಆಟಗಾರರ ಪರಾಕ್ರಮವನ್ನು ಕಣ್ತುಂಬಿಕೊಂಡರು. ಪಂದ್ಯ ಭಾರತದ ಕೈವಶವಾಗುತ್ತಿದ್ದಂತೆ ಸಿಹಿಹಂಚಿ ಸಂಭ್ರಮಿಸಿದರು. ಯಾದಗಿರಿಯಲ್ಲಿ ನಗರದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ನೆರೆದ ಯುವಕರು ಭಾರತದ ಪರ ಘೋಷಣೆ ಕೂಗಿದರೆ, ಗುಮ್ಮಟನಗರಿ ವಿಜಯಪುರದ ಗೋಳಗುಮ್ಮಟ ಏರಿಯಾದಲ್ಲಿ ಯುವಕರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತನ್ನ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಭಾರತ ಜಯಭೇರಿ ಬಾರಿಸುತ್ತಲೇ ಹಾಸನದಲ್ಲೂ ಕಿಕೆಟ್‌ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ನಗರದ ಕೆ.ಆರ್‌.ಪುರಂ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.