ಸಾರಾಂಶ
ಸೂರ್ಯಕುಮಾರ್ ಅವರ ಪತ್ನಿ ದೀವಿಶಾ ಶೆಟ್ಟಿ ಕರಾವಳಿ ಮೂಲದವರಾಗಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ದಂಪತಿ ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತ ಕ್ರಿಕೆಟ್ ತಂಡದ ಟ್ವೆಂಟಿ 20 ಸ್ಪೆಷಲಿಸ್ಟ್ ಆಟಗಾರ ಸೂರ್ಯ ಕುಮಾರ್ ಯಾದವ್ ಸೋಮವಾರ ಮಂಗಳೂರಿಗೆ ಆಗಮಿಸಿದ್ದರು.ಸೂರ್ಯಕುಮಾರ್ ಅವರ ಪತ್ನಿ ದೀವಿಶಾ ಶೆಟ್ಟಿ ಕರಾವಳಿ ಮೂಲದವರಾಗಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ದಂಪತಿ ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.ಈ ದಂಪತಿ ಸೋಮವಾರ ಎಂಟನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ‘ಪ್ರಣಾಮ್’ ತಂಡದವರು ದಂಪತಿ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಮಾಹಿತಿಯನ್ನು ವಿಮಾನ ನಿಲ್ದಾಣದ ಆಡಳಿತ ತನ್ನ ‘ಎಕ್ಸ್’ ಖಾತೆಯಲ್ಲಿ ಚಿತ್ರ ಸಮೇತ ಹಂಚಿಕೊಂಡಿದೆ.
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೀವಿಶಾ ಶೆಟ್ಟಿ ಚೆನ್ನಾಗಿ ತುಳು ಮಾತಾಡುತ್ತಾರೆ. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಅವರ ಸ್ಫೋಟಕ ಆಟಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರು ‘ಈ ಬಾರಿ ಎಡ್ಡೆ ಗೊಬ್ಬಿಯ ಸೂರ್ಯ’ (ತುಂಬಾ ಚೆನ್ನಾಗಿ ಆಟವಾಡಿದೆ ಸೂರ್ಯ) ಎಂದು ಸಾಮಾಜಿಕ ಜಾಲತಾಣದ ಮೂಲಕ ತುಳು ಭಾಷೆಯಲ್ಲಿ ಪ್ರಶಂಸಿಸಿದ್ದರು. ಈ ಪೋಸ್ಟ್‌ಗೆ ಸೂರ್ಯಕುಮಾರ್ ಅವರ ಪತ್ನಿ ದೀವಿಶಾ, ‘ಚೂರ್ ತುಳು ಕಲ್ಪಾವೊಡು ಆರೆಗ್ ನನ’ (ಅವರಿಗೆ ಇನ್ನು ಸ್ವಲ್ಪ ತುಳು ಕಲಿಸಬೇಕು) ಎಂದು ಪ್ರತಿಕ್ರಿಯಿಸಿದ್ದರು. ಈ ಹಿಂದೆ ಸೂರ್ಯ ಮಗಳು ತುಳುವಿನಲ್ಲಿ ಮಾತನಾಡುವ ವೀಡಿಯೋ ಕೂಡ ವೈರಲ್ ಆಗಿತ್ತು.