ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾಮಾಜಿಕ ಹೊಣೆಗಾರಿಕೆ ನಿಧಿ ಅನುದಾನದಲ್ಲಿ ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಅಪರಾಧ ಪ್ರಕರಣಗಳನ್ನು ತಡೆಯಲು ಹಾಗೂ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ತಿಳಿಸಿದರು.ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸೋಮವಾರ ಸಿಎಸ್‌ಅರ್ ಅನುದಾನದಡಿ 3.28 ಕೋಟಿ ರು. ವೆಚ್ಚದ ನಾಲ್ಕು ಪೊಲೀಸ್ ವಾಹನಗಳಿಗೆ ಚಾಲನೆ ನೀಡಿ ಸಂಚಾರ ಸುರಕ್ಷತೆಗಾಗಿ ಅಳವಡಿಸಿರುವ ಪೊಲೀಸ್ ಚೌಕಿ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಕ್ಯಾಮೆರಾಗಳು, ಸಿಸಿ ಟಿವಿ ಕಮಾಂಡ್ ಸೆಂಟರ್‌ಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಹಾ ನಗರಗಳಲ್ಲಿರುವಂತಹ ಪೊಲೀಸ್ ಚೌಕಿ ವ್ಯವಸ್ಥೆಯನ್ನು ಮಳವಳ್ಳಿ ಪಟ್ಟಣಕ್ಕೆ ಅಳವಡಿಸಿರುವುದು ಪೊಲೀಸ್ ಸಿಬ್ಬಂದಿ ಕಾರ್ಯ ಕ್ಷಮತೆ ಹೆಚ್ಚಿಸುವಂತಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು ಅತ್ಯಾಧುನಿಕ ಸಿಗ್ನಲ್ ದೀಪ ಅಳವಡಿಸಿರುವುದು ಸುಲಭ ಸಂಚಾರಕ್ಕೆ ಸಹಕಾರಿಯಾಗಿದೆ ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಾರ್ವಜನಿಕ ಉಪಯೋಗ ಕೆಲಸಕ್ಕೆ ತಮ್ಮದೇ ಶ್ರೇಷ್ಠತೆ ಮತ್ತು ದೂರದೃಷ್ಟಿ ಚಿಂತನೆ ಹೊಂದಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ವಿಶೇಷ ಕಾಳಜಿಯಿಂದ ಪೊಲೀಸ್ ಇಲಾಖೆಗೆ ನೀಡಿರುವ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಾಲೂಕಿನ ಶೈಕ್ಷಣಿಕ ಪ್ರಗತಿ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಡಿಜಿಟಲೀಕರಣ ಪರಿಣಾಮ ಬೀರಲಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ, ಒಳ್ಳೆಯ ಕೆಲಸಗಳು ಜನರು ಮನದಲ್ಲಿ ಉಳಿಯಲಿದೆ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕಾಲಘಟ್ಟ ಬದಲಾದಂತೆ ನಾವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ನೀಡಿರುವ ಸವಲತ್ತುಗಳಿಂದ ಮಳವಳ್ಳಿಗೆ ಅನುಕೂಲವಾಗಲಿದೆ. ಶಾಸಕರ ಕಾಳಜಿಯನ್ನು ಎಲ್ಲರೂ ಪ್ರಶಂಸಿಸಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಅನುಕೂಲಕ್ಕಾಗಿ 8 ಸಾವಿರ ಮಕ್ಕಳಿಗೆ ಕಲಿಕಾ ಮಿತ್ರ ಪುಸ್ತಕಗಳನ್ನು ನೀಡಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಇದ್ದರಿಂದ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿವಿಧ ಬಗೆಯ ಉದ್ಯಮಗಳಿದ್ದು ಅಭಿವೃದ್ಧಿ ಪಥದಲ್ಲಿವೆ. ನಂಜುಂಡಪ್ಪ ವರದಿಯಿಂದಲೂ ಅತ್ಯಂತ ಹಿಂದುಳಿದ ಮಳವಳ್ಳಿ ತಾಲೂಕಿನಲ್ಲಿ ಯಾವುದೇ ಉದ್ದಿಮೆಗಳಿಲ್ಲದೇ ಅಭಿವೃದ್ಧಿಯಲ್ಲಿ ಹಿಂದಿದೆ ಎಂದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಕನ್ನಂಬಾಡಿ ಕಟ್ಟೆಯಿಂದ ಅರ್ಧ ಭಾಗಕ್ಕೆ ನೀರು ಸಿಕ್ಕರೆ, ಮತ್ತರ್ಧ ಭಾಗ ಒಣ ಪ್ರದೇಶ. ಈ ಸಮಸ್ಯೆ ಅರಿತು ನೀರಾವರಿ ಕ್ಷೇತ್ರಕ್ಕೆ ಅದ್ಯತೆ ನೀಡಿದ ಪರಿಣಾಮ ಹಲಗೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬರಡು ಭೂಮಿಯಲ್ಲಿ ಈಗ ಅಂತರ್ಜಲ ಹೆಚ್ಚಳವಾಗಿದೆ. ರೈತರ ಮೊಗದಲ್ಲಿ ಸಂತಸ ತಂದಿದೆ ಎಂದರು.600 ಕೋಟಿ ವೆಚ್ಚದಲ್ಲಿ ನಾಲಾ ಆಧುನೀಕರಣ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಹಾಗೂ ಆರೋಗ್ಯ ಇಲಾಖೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮತದಾರರು ಕೊಟ್ಟಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭರಾಣಿ, ಜಿಪಂ ಇಒ ಕೆ.ಆರ್.ನಂದಿನಿ, ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ಚಂದನ್, ಸನ್ಸೆರಾ ಫೌಂಡೇಶನ್ ವ್ಯವಸ್ಥಾಪಕ ಮನೋಹರ್, ಗಿರೀಶ್, ದಾಹೂದ್, ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಬಿ.ಎಸ್.ಶ್ರೀಧರ್, ಬಸವರಾಜು, ಜಯನಂದ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಸನ್ಸೆರಾ ಫೌಂಡೇಶನ್ ಮನೋಹರ್, ವಸಂತ್ ಭಾರದ್ವಾಜ್, ಗಿರೀಶ್ ರಾವ್, ಇತರೆ ಕಂಪನಿಗಳ ಸೂರ್ಯನಾರಾಯಣ, ಬಾಬು ಸೇರಿದಂತೆ ಇತರರು ಇದ್ದರು.