ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಿಮಿನಲ್ ಕೇಸ್

| Published : Jul 01 2025, 01:47 AM IST / Updated: Jul 01 2025, 01:48 AM IST

ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಿಮಿನಲ್ ಕೇಸ್
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನಿಗೆ ಹೆಚ್ಚು ಗೊಬ್ಬರ ಹಾಕಿದರೆ ಹೆಚ್ಚು ಇಳುವರಿ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ. ಈ ಕಲ್ಪನೆಯಿಂದ ರೈತರು ಮೊದಲು ಹೊರಬರಬೇಕು. ಕಲಘಟಗಿ ತಾಲೂಕಿಗೆ 4800 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಕು. ಸಧ್ಯ 5 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಿದೆ.

ಧಾರವಾಡ: ಬೇಡಿಕೆಗಿಂತ ಹೆಚ್ಚು ರಾಸಾಯನಿಕ ಗೊಬ್ಬರ ವಿತರಿಸಿದರೂ ಕಲಘಟಗಿ ತಾಲೂಕಿನಲ್ಲಿ ಅನಗತ್ಯ ಗೊಂದಲಗಳು, ರೈತರಿಗೆ ತೊಂದರೆಗಳು ಉಂಟಾಗುತ್ತಿವೆ. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ವಿತರಕರು ಸರ್ಕಾರದ ನಿಯಮ, ಷರತ್ತು ಪಾಲಿಸದಿರುವುದು ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮಬದ್ಧವಾಗಿ ಮೇಲುಸ್ತುವಾರಿ ಹಾಗೂ ನಿಗಾವಹಿಸದಿರುವುದು ಕಂಡು ಬಂದಿದೆ. ಅಧಿಕಾರಿಗಳಿಂದ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಕಲಘಟಗಿ ಪಟ್ಟಣದ ಬೀಜ, ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಜಮೀನಿಗೆ ಹೆಚ್ಚು ಗೊಬ್ಬರ ಹಾಕಿದರೆ ಹೆಚ್ಚು ಇಳುವರಿ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ. ಈ ಕಲ್ಪನೆಯಿಂದ ರೈತರು ಮೊದಲು ಹೊರಬರಬೇಕು. ಕಲಘಟಗಿ ತಾಲೂಕಿಗೆ 4800 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಕು. ಸಧ್ಯ 5 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಿದೆ ಎಂಬ ಮಾಹಿತಿ ನೀಡಿದರು.

ಟಾಸ್ಕ್‌ ಪೋರ್ಸ್ ರಚನೆ: ಕೆಲವು ರಸಗೊಬ್ಬರ ಮಾರಾಟಗಾರರು ಮತ್ತು ಇತರರು ರೈತರಿಗೆ ರಸಗೊಬ್ಬರ ವಿತರಿಸುವಲ್ಲಿ ಕಾನೂನು, ಸರ್ಕಾರದ ಆದೇಶ ಮೀರಿ ವರ್ತಿಸುತ್ತಿರುವುದು ಮತ್ತು ರೈತರನ್ನು ವಂಚಿಸುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ನಿಯಮಾನುಸಾರ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ, ಕಳೆನಾಶಕ ವಿತರಿಸುವುದನ್ನು ಪರಿಶೀಲಿಸಲು, ನಿರಂತರ ನಿಗಾವಹಿಸಲು ಮತ್ತು ಸೂಕ್ತ ಕಾನೂನು ಕ್ರಮಕ್ಕಾಗಿ ತಹಸೀಲ್ದಾರರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ. ಈ ಸಮಿತಿ ಎಲ್ಲ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ನಿರಂತರ ಭೇಟಿ ನೀಡಿ, ನಿಗಾವಹಿಸಲಿದೆ ಮತ್ತು ಮೇಲುಸ್ತುವಾರಿ ಮಾಡಲಿದೆ ಎಂದರು.

ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟಗಾರರು ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಪಿಓಎಸ್ ಮಷೀನ್ ಬಳಸಬೇಕು. ರೈತರ ಹೆಬ್ಬಟ್ಟು ಪಡೆದು, ಪಹಣಿ, ಆಧಾರ ಪ್ರತಿ ಸಂಗ್ರಹಿಸಬೇಕು ಎಂದು ನಿರ್ದೇಶಿಸಿದ ಜಿಲ್ಲಾಧಿಕಾರಿಗಳು, ರೈತರು ಬೇಡಿದ ಗೊಬ್ಬರ ಪೂರೈಸಬೇಕು. ಯಾವುದೇ ಲಿಂಕ್ ಗೊಬ್ಬರ, ಇತರ ಉತ್ಪನ್ನ ತೆಗೆದುಕೊಳ್ಳುವಂತೆ ಒತ್ತಾಯಿಸುವುದು ಕಾನೂನುಬಾಹಿರ ಎಂದರು.

ಜಿಎಸ್‌ಟಿ ಬಿಲ್‌ ನೀಡಿ: ಗೊಬ್ಬರ ಅಂಗಡಿಯವರು ರೈತರಿಗೆ ಬರೀ ಬಿಳಿ ಹಾಳೆಯಲ್ಲಿ ಬರೆದುಕೊಡುತ್ತಾರೆ. ಬಿಲ್ ಕೊಡುತ್ತಿಲ್ಲ. ಜಿ.ಎಸ್.ಟಿ ಬಿಲ್ಲ ನೀಡುವುದೇ ಇಲ್ಲ ಎಂದು ಅನೇಕರು ತಮ್ಮ ಬಳಿ ದೂರಿದ್ದಾರೆ. ಪ್ರತಿಯೊಬ್ಬ ರೈತ ಗೊಬ್ಬರ ಖರೀದಿಸಿದರೆ ಅವನಿಗೆ ಜಿ.ಎಸ್.ಟಿ ನಮೂದಿಸಿರುವ ಪಕ್ಕಾ ಬಿಲ್‌ ಕೊಡಬೇಕು. ಬಿಲ್ ಕೊಡದೆ ರೈತರಿಗೆ ಮೋಸ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.

ಅಭಾವ ಸೃಷ್ಟಿಸಿದರೆ ಕೇಸ್: ಬೇಡಿಕೆಗಿಂತ ಹೆಚ್ಚು ಯೂರಿಯಾ ಸೇರಿ ವಿವಿಧ ರಸಗೊಬ್ಬರಗಳನ್ನು ರೈತರ ಬೇಡಿಕೆ ಮೇರೆಗೆ ಕಲಘಟಗಿ ತಾಲೂಕಿಗೆ ಕೃಷಿ ಇಲಾಖೆ ಪೂರೈಸಿದೆ. ಆದರೂ ರೈತರು ಪ್ರತಿ ದಿನ ಗೊಬ್ಬರ ಖರೀದಿಗೆ ಅಂಗಡಿಗಳ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಗೊಬ್ಬರ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಈ ಕುರಿತು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ, ವಿವರ ಪಡೆದುಕೊಳ್ಳುತ್ತೇನೆ. ಗೊಬ್ಬರದ ಕಳ್ಳ ಮಾರಾಟ, ಅನರ್ಹರಿಗೆ ಮತ್ತು ಕೃಷಿಕರಲ್ಲದವರಿಗೆ ಗೊಬ್ಬರ ಪೂರೈಸಿದ್ದು ಅಥವಾ ಅಕ್ರಮ ದಾಸ್ತಾನು ಮಾಡಿ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದ್ದರೆ ಅಂತವರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಮಾರಾಟದ ಲೈಸನ್ಸ್ ರದ್ದು ಮಾಡಿ ಅಂಗಡಿ ಸೀಲ್ ಮಾಡುತ್ತೇನೆ ಎಂದರು.

ಪ್ರತಿ ರಸಗೊಬ್ಬರ ಮಾರಾಟ ಅಂಗಡಿ ಮುಂದೆ ಅವರಲ್ಲಿ ಲಭ್ಯವಿರುವ ರಸಗೊಬ್ಬರಗಳು, ಅವುಗಳ ದರ, ಮಾರಾಟವಾದ ಚೀಲಗಳು, ದಾಸ್ತಾನು ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಇದರಿಂದ ರೈತರಿಗೆ ಅಗತ್ಯ ಮಾಹಿತಿ ಲಭಿಸಿ, ಅನಗತ್ಯ ಸಮಯ ಹಾಳು ತಪ್ಪುತ್ತದೆ ಎಂದು ಹೇಳಿದರು.

ಈ ವೇಳೆ ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪ್ರಭಾರಿ ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಇದ್ದರು.