ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳ ಜಂಟಿ ಅಧಿವೇಶನಗಳಲ್ಲಿ ರಾಜ್ಯಪಾಲರ ನೀತಿ ಭಾಷಣ ಸಂವಿಧಾನದ ಪ್ರಕಾರ ಸರ್ಕಾರದ ಮುಂದಿನ ಒಂದು ವರ್ಷದ ನೀತಿಯನ್ನು ಬಿಂಬಿಸಬೇಕೇ ಹೊರತು, ಟೀಕೆಗಳಿಗಲ್ಲ. ಆದರೆ, ಸದನವನ್ನು ಇತರ ಸರ್ಕಾರಗಳು ಅಥವಾ ಕೇಂದ್ರ ಸರ್ಕಾರವನ್ನು ಟೀಕಿಸಲು ವೇದಿಕೆಯನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಪಕ್ಷದ ವೇದಿಕೆಗಳಲ್ಲಿ ಟೀಕೆಗಳು ಇರಲಿ, ಆದರೆ ಶಾಸಕಾಂಗದ ವೇದಿಕೆ ಟೀಕೆಗಲ್ಲ ಎಂದು ಕೇರಳ ಮತ್ತು ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಿ ನೌಕರರ ಸಂಘದ ಎನ್‌ಜಿಒ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಟಿ.ಎನ್‌.ಧ್ರುವಕುಮಾರ್‌ ಅವರ ‘ಸಂಸದೀಯ ಹಕ್ಕು ಬಾಧ್ಯತೆಗಳ ಒಂದು ನೋಟ-ಗ್ಲಿಂಪ್ಸಸ್‌ ಆಫ್‌ ಪಾರ್ಲಿಮೆಂಟರಿ ಪ್ರಿವಿಲೇಜಸ್‌’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸಂಸದೀಯ ನಡಾವಳಿಗಳು ಮತ್ತು ಹಕ್ಕು ಬಾಧ್ಯತೆಗಳು ಕೇವಲ ಸಂಘರ್ಷ ಮಾಡಲು ಅಲ್ಲ, ಬದಲಿಗೆ ಅವು ಸೌಹಾರ್ದತೆ ಮತ್ತು ಸಹಕಾರದ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.

ಜನಪ್ರತಿನಿಧಿಗಳಿಗೆ ಶಿಕ್ಷಣ ಅಗತ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓದು ಮತ್ತು ಬರಹ ಗೊತ್ತಿಲ್ಲದವರೂ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಕನಿಷ್ಠ ಕಾರು ಚಾಲನೆ ಮಾಡಲು ಅಥವಾ ಕಚೇರಿಯೊಂದರಲ್ಲಿ ಅಟೆಂಡರ್‌ ಹುದ್ದೆಗೆ ಸೇರಲು ವಿದ್ಯಾರ್ಹತೆ ಮತ್ತು ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಆದರೆ, ಇಡೀ ದೇಶದ ಭವಿಷ್ಯವನ್ನು 5 ವರ್ಷಗಳ ಕಾಲ ಕೈಯಲ್ಲಿ ಹಿಡಿಯುವ ಜನಪ್ರತಿನಿಧಿಗಳ ವಿದ್ಯಾರ್ಹತೆಯ ಬಗ್ಗೆ ನಾವೇಕೆ ಯೋಚಿಸುತ್ತಿಲ್ಲ ಎಂಬ ಬಗ್ಗೆ ಜನರು ತಾವೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಅವರು ಮಾತನಾಡಿ, ಸಂಸದೀಯ ವಿಶೇಷಾಧಿಕಾರಗಳು ಹಾಗೂ ಪತ್ರಿಕೋದ್ಯಮದ ನಡುವಿನ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಆಳವಾಗಿ ವಿಶ್ಲೇಷಿಸಿರುವ ಧ್ರುವಕುಮಾರ್ ಅವರ ಈ ಕೃತಿಯು ಭಾರತೀಯ ಸಂಸದೀಯ ಇತಿಹಾಸದಲ್ಲೇ ಒಂದು ವಿಶಿಷ್ಟ ಆಕರ ಗ್ರಂಥವಾಗಿದೆ. ಮಾಧ್ಯಮಗಳು ಮತ್ತು ಸಂಸತ್ತಿನ ಹಕ್ಕುಚ್ಯುತಿ ಪ್ರಕ್ರಿಯೆಗಳ ನಡುವಿನ ಸಂಘರ್ಷವನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಸಹಕಾರಿ. ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ಹೇಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂಬುದಕ್ಕೆ ಈ ಕೃತಿ ದಿಕ್ಸೂಚಿ ಇದ್ದಂತೆ ಎಂದರು.


ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕೆ.ವಿ.ಧನಂಜಯ್‌ ಮಾತನಾಡಿ, ಕೇರಳ ಮತ್ತು ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರ ಕಾರ್ಯವೈಖರಿ ಶ್ಲಾಘಿಸಿದ ಅವರು, ಕಳೆದ ವರ್ಷ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಬಾರಿಯೂ ಪರಿಸ್ಥಿತಿ ಕೈಮೀರಬಹುದು ಎಂಬ ಆತಂಕವಿತ್ತು. ಆದರೆ, ರಾಜ್ಯಪಾಲರು ಇಡೀ ಪರಿಸ್ಥಿತಿಯನ್ನು ಅತ್ಯಂತ ಘನತೆ ಮತ್ತು ಸೌಹಾರ್ದತೆಯಿಂದ ನಿಭಾಯಿಸಿದರು ಎಂದು ಹೇಳಿದರು.

ಇದೇ ವೇಳೆ ನರಸಿಂಹಮೂರ್ತಿ ಸ್ವಾಮೀಜಿ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ವಿಧಾನ ಪರಿಷತ್‌ ಮಾಜಿ ಸಭಾಪತಿ ಸುದರ್ಶನ್‌ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಮಾಜಿ ಆಧ್ಯಕ್ಷ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ನಗರದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಟಿ.ಎನ್‌.ಧ್ರುವಕುಮಾರ್‌ ಅವರ ‘ಸಂಸದೀಯ ಹಕ್ಕು ಬಾಧ್ಯತೆಗಳ ಒಂದು ನೋಟ’ ಕೃತಿಯನ್ನು ಕೇರಳ ಮತ್ತು ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಬಿಡುಗಡೆಗೊಳಿಸಿದರು.