ಸಾರಾಂಶ
ಯಲ್ಲಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ವಿಶ್ವಾಸ ಆಧರಿಸಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ. ಸರ್ಕಾರದ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಬಡ ಫಲಾನುಭವಿಗಳನ್ನು ಅವಮಾನಿಸಲಾಗುತ್ತಿದೆ. ಇದು ಸಮರ್ಪಕವಲ್ಲ ಎಂದು ಗ್ಯಾರಂಟಿ ಯೋಜನಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಡಿ.ಎನ್. ಗಾಂವ್ಕರ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸಮಿತಿಗಳ ಆಶ್ರಯದಲ್ಲಿ ಪಟ್ಟಣದ ಮಂಜುನಾಥ ನಗರದಲ್ಲಿ ಮೇ ೧ರಂದು ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ, ನರೇಗಾ ಯೋಜನೆಯಲ್ಲಿ ಪ್ರತಿ ಕಾರ್ಮಿಕರಿಗೆ ಪ್ರತಿ ದಿನ ₹೪೦೦, ಒಂದು ಲಕ್ಷ ಮಹಿಳೆಯರಿಗೆ ಸಹಾಯಧನ ಮುಂತಾದ ಗ್ಯಾರಂಟಿಗಳನ್ನು ಈಗಲೂ ನೀಡಲಾಗಿದೆ. ಮೋದಿಯವರು ಪ್ರಧಾನಿಯಾದಾಗ ಪ್ರತಿಯೊಬ್ಬರ ಖಾತೆಗೆ ₹೧೫ ಲಕ್ಷ ನೀಡುವುದಾಗಿ ಭರವಸೆ ನೀಡಿ, ಮತದಾರರಿಗೆ ಮೋಸ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ ಮಾತನಾಡಿ, ಸ್ವಾತಂತ್ರ ಪಡೆದಾಗ ಶೂನ್ಯದಿಂದ ಬಂದಿರುವ ದೇಶಕ್ಕೆ ಕಾಂಗ್ರೆಸ್ ಆಡಳಿತದಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗಿದೆ. ಬಿಜೆಪಿ ಜಾತಿ, ಧರ್ಮದ ಹೆಸರಲ್ಲಿ ಜನರ ಭಾವನೆಗಳನ್ನು ಕೆದಕಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯವರು ಬಡಜನರ ಬದುಕನ್ನೇ ನಾಶ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದರು.ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿ, ನಾವು ನುಡಿದಂತೆ ನಡೆದಿರುವ ಹಿನ್ನೆಲೆ ಆತ್ಮವಿಶ್ವಾಸದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಪರವಾಗಿ ಮತ ಕೇಳಲು ಬಂದಿದ್ದೇವೆ ಎಂದರು.
ಕಾಂಗ್ರೆಸ್ ನಗರ ಘಟಕಾಧ್ಯಕ್ಷ ರವಿಚಂದ್ರ ನಾಯ್ಕ ಮಾತನಾಡಿ, ಅಧಿಕಾರವಿದ್ದಾಗ ಮಾತ್ರ ಕೆಲಸ ಮಾಡಲು ಸಾಧ್ಯ. ಡಾ. ಅಂಜಲಿ ನಿಂಬಾಳ್ಕರ ಯೋಗ್ಯರಾಗಿದ್ದು, ಅತಿಕ್ರಮಣದಾರರ ಬೇಡಿಕೆ ಹಾಗೂ ನಿರುದ್ಯೋಗಿಗಳ ಪರವಾಗಿ ಸ್ಪಂದಿಸುವರೆಂಬ ವಿಶ್ವಾಸ ನಮ್ಮದು ಎಂದರು.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿ.ಎಸ್. ಭಟ್ಟ, ಸಾಮಾಜಿಕ ಜಾಲತಾಣಗಳ ಪ್ರಮುಖಿ ಮುಸ್ರತ್ ಶೇಖ, ಪಪಂ ಸದಸ್ಯ ಸತೀಶ ನಾಯ್ಕ, ಪಪಂ ಮಾಜಿ ಅಧ್ಯಕ್ಷ ಎಂ.ಡಿ. ಮುಲ್ಲಾ, ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ಅನಿಲ ಮರಾಠೆ, ವಂದನಾ ಭಟ್ಟ, ಬಿಂದು, ಜಾನಿ ಅಲ್ಫಾಂಸೋ, ರೂಜಾರಿಯೋ ಮುಂತಾದವರು ವೇದಿಕೆಯಲ್ಲಿದ್ದರು. ಕಾಂಗ್ರೆಸ್ ಪ್ರಮುಖ ಜಿ.ವಿ. ಭಟ್ಟ ಸ್ವಾಗತಿಸಿ, ನಿರ್ವಹಿಸಿದರು.