ಪ್ರಜ್ವಲ್ ಕೈ ಹಿಡಿದು ಮತಯಾಚಿಸಿದ್ದಕ್ಕೆ ಮೋದಿ ಪ್ರಶ್ನೆ ಮಾಡುತ್ತೇವೆ: ಡಿಕೆಶಿ

| Published : May 03 2024, 01:14 AM IST / Updated: May 03 2024, 11:10 AM IST

DK Shivakumar
ಪ್ರಜ್ವಲ್ ಕೈ ಹಿಡಿದು ಮತಯಾಚಿಸಿದ್ದಕ್ಕೆ ಮೋದಿ ಪ್ರಶ್ನೆ ಮಾಡುತ್ತೇವೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ದೇಶದ ಪ್ರಧಾನಿ ಮೋದಿಯವರು ಪ್ರಜ್ವಲ್‌ ಕೈ ಹಿಡಿದು ಮತಯಾಚಿಸಿದ್ದರಿಂದಲೇ ಪೆನ್‌ಡ್ರೈವ್ ವಿಷಯವಾಗಿ ನಾವು ಮೋದಿಯವರನ್ನು ಕೇಳುತ್ತಿರೋದು. ಹಾದಿ, ಬೀದಿಯಲ್ಲಿ ಹೋಗುವವರನ್ನು ಈ ವಿಷಯವಾಗಿ ಕೇಳೋದಕ್ಕೆ ಆಗುತ್ತಾ? ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಖಾರವಾಗಿ ಪ್ರಶ್ನಿಸಿದ್ದಾರೆ.

 ಕಲಬುರಗಿ :  ಈ ದೇಶದ ಪ್ರಧಾನಿ ಮೋದಿಯವರು ಪ್ರಜ್ವಲ್‌ ಕೈ ಹಿಡಿದು ಮತಯಾಚಿಸಿದ್ದರಿಂದಲೇ ಪೆನ್‌ಡ್ರೈವ್ ವಿಷಯವಾಗಿ ನಾವು ಮೋದಿಯವರನ್ನ ಕೇಳುತ್ತಿರೋದು. ಯಾರಾದರೂ ಹಾದಿಗೆ, ಬೀದಿಗೆ ಹೋಗೋರನ್ನ ಈ ವಿಷಯವಾಗಿ ಕೇಳೋದಕ್ಕೆ ಆಗುತ್ತಾ? ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಖಾರವಾಗಿ ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಹಗರಣದಲ್ಲಿ ಪ್ರಧಾನಮಂತ್ರಿಗಳನ್ನು ಯಾಕೆ ಎಳೆದು ತರುತ್ತೀರಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಪ್ರಧಾನ ಮಂತ್ರಿಗಳು ಪ್ರಜ್ವಲ್ ಪರ ಮತಯಾಚನೆ ಮಾಡಿದ್ದಾರಲ್ಲ. ಅವರದೇ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಕಾರಣ ನಾವು ಪೆನ್‌ಡ್ರೈವ್ ವಿಚಾರದಲ್ಲಿ ಮೋದಿ ಅವರನ್ನು ಪ್ರಶ್ನೆ ಮಾಡಲೇಬೇಕು ತಾನೆ? ಎಂದು ಕೇಳಿದರು.

ಪ್ರಜ್ವಲ್ ಬಂಧಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಲಿ ಎಂಬ ಆರ್‌.ಅಶೋಕ್‌ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ಬೇರೆ ವಿಚಾರಗಳಲ್ಲಿ ವಾಗ್ದಾಳಿ ಮಾಡುತ್ತಿದ್ದವರು ಈ ಪ್ರಕರಣಗಳಲ್ಲಿ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಅಶೋಕ ಅವರು ತಮ್ಮ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ಶೋಭಕ್ಕ, ಸಿ.ಟಿ. ರವಿ, ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರನ್ನು ಕರೆದುಕೊಂಡು ಹೋಗಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ಪ್ರಜ್ವಲ್‌ರ ಮಾಜಿ ಡ್ರೈವರ್‌ ಕಾರ್ತಿಕ್‌ನನ್ನು ಮಲೇಷ್ಯಾದಲ್ಲಿ ಇಟ್ಟವರ್ಯಾರು? ಇದೆಲ್ಲ ಬ್ರದರ್ಸ್‌ ಆಟ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ, ಹೌದಾ ಅವರಿಗೆ ಎಲ್ಲಾ ವಿಚಾರ ಗೊತ್ತಿದೆ ಅಂತಾಯ್ತು, ಕೇಂದ್ರಕ್ಕೆ ಹೇಳಿ ಯಾರು, ಯಾರನ್ನ ಎಲ್ಲಿಟ್ಟಿದ್ದಾರೆಂಬ ಮಾಹಿತಿ ಪಡೆಯಲಿ. ಅವರನ್ನ ವಿದೇಶಕ್ಕೆ ಕಳುಹಿಸಲು ನನಗೆ ತಲೆ ಕೆಟ್ಟಿದೆಯೇ? ಎಂದರು.

ನೇರ ರಸ್ತೆಯಲ್ಲೇ ಹೋರಾಟ ಮಾಡುವವ ನಾನು, ಯಾರನ್ನೋ ತೋಟದಲ್ಲಿ ಬಚ್ಚಿಟ್ಟು ರಾಜಕಾರಣ ಮಾಡೋನಲ್ಲ, ಅ‍ವರಿಗೆ ಅಗತ್ಯವಿದ್ದರೆ ಮಾಡಿಕೊಳ್ಳಲಿ ಎಂದರು.